ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವಕೊಲ್ಲಿಯ ಗಾರೆಮುರಿ ಬಳಿ ಎರಡು ಕಾರುಗಳ ನಡುವೆ ಭಾನುವಾರ ಸಂಜೆ 4 ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ.
ಅಲ್ಟ್ರೋಜ್ ಹಾಗೂ ಪುಂಟೊ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ಕಾರು ನಜ್ಜುಗುಜ್ಜಾಗಿದೆ. ನಾಲ್ವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಗಣೇಶ ಆಚಾರ್ಯ, ಶರತ್ ಸಂಪಾಜೆ ಕೀಲಾರು, ಪ್ರಮೋದ್ ಗುತ್ತಿಗಾರು, ಸಂಪಾಜೆ ಉಪ ಠಾಣೆ ಆರಕ್ಷಕ ಸಿಬ್ಬಂದಿ , ಕೊಡಗು ಸಂಪಾಜೆ ಅರಣ್ಯಾಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಒಂದು ಕಾರಿನಲ್ಲಿದ್ದವರು ಮಂಗಳೂರು ಮೂಲದವರು, ಮತ್ತೊಂದು ಕಾರಿನಲ್ಲಿದ್ದವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ.