ನ್ಯೂಸ್ ನಾಟೌಟ್ : ಮುಂಬರುವ ದಿಲ್ಲಿ ವಿಧಾನಸಭೆ ಚುನಾವಣೆಗಾಗಿ ನಡೆಯುತ್ತಿರುವ ಮನೆಮನೆ ಪ್ರಚಾರದ ವೇಳೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರ ಬೆಂಗಾವಲು ಪಡೆಯ ಮೇಲೆ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಶನಿವಾರ(ಜ.18) ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನತ್ತ ಕಲ್ಲು ತೂರುವ ಮೂಲಕ ಬಿಜೆಪಿಯು ಆಪ್ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದೆ ಎಂದೂ ದೂರಿದೆ. ಇದಕ್ಕೆ ಪ್ರತಿಯಾಗಿ, ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ರ ಕಾರು ಇಬ್ಬರು ವ್ಯಕ್ತಿಗಳ ಮೇಲೆ ಹರಿದಿದೆ ಎಂದು ಬಿಜೆಪಿಯ ಸಂಸದ ಪರ್ವೇಶ್ ವರ್ಮ ಪ್ರತ್ಯಾರೋಪ ಮಾಡಿದ್ದಾರೆ.
ಆಪ್ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ಅರವಿಂದ್ ಕೇಜ್ರಿವಾಲ್ ರ ಕಾರಿನ ಮೇಲೆ ಕಲ್ಲು ಬೀಳುತ್ತಿರುವುದನ್ನು ನೋಡಬಹುದಾಗಿದೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಆಪ್, “ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮ ಕಡೆಯ ಗೂಂಡಾಗಳು ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಅವರು ಪ್ರಚಾರ ಮಾಡದಂತೆ ತಡೆಯಲು ಅವರನ್ನು ಗಾಯಗೊಳಿಸಲು ಪ್ರಯತ್ನಿಸಿದ್ದಾರೆ. ಬಿಜೆಪಿ ಜನರೇ, ನಿಮ್ಮ ಹೇಡಿ ಕೃತ್ಯದಿಂದ ಕೇಜ್ರಿವಾಲ್ ಹೆದರಿಕೊಳ್ಳುವುದಿಲ್ಲ. ದಿಲ್ಲಿಯ ಜನರು ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
Click