ಮಲೇಬೆನ್ನೂರು: ಮಕ್ಕಳು ಆಟಿಕೆಯಲ್ಲಿ ಆಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಪಡ್ಡೆ ಯುವಕರ ತಂಡ ದೇವರಬೆಳಕೆರೆ ಹೊಸ ಸೇತುವೆಯ ಮೇಲೆ ಲಾಂಗ್ ಹಿಡಿದು ಆಟವಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಒಬ್ಬ ಯುವಕ ಲಾಂಗ್ ಹಿಡಿದು ಇನ್ನೊಬ್ಬನನ್ನು ಬೆದರಿಸುತ್ತಿದ್ದರೆ, ಮತ್ತೊಬ್ಬ ಬಿಡಿಸಲು ಯತ್ನಿಸಿದ್ದಾನೆ. ‘ವಿಡಿಯೊ ದೃಶ್ಯಾವಳಿ ಬೆಚ್ಚಿ ಬೀಳಿಸುವಂತಿದೆ. ಧೈರ್ಯವಾಗಿ ಓಡಾಡುವುದು ಕಷ್ಟ. ಹೊಲಗದ್ದೆ ತೋಟಕ್ಕೆ ಕೆಲಸಕ್ಕೆ ಹೋಗಲು ಹೆದರಿಕೆಯುಂಟಾಗುತ್ತಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈಚೆಗೆ ದೇವರಬೆಳಕೆರೆ ಪ್ರವಾಸಿ ತಾಣ ಪಡ್ಡೆ ಹುಡುಗರ ಮೋಜು–ಮಸ್ತಿ ಸ್ಥಳವಾಗಿ ಮಾರ್ಪಟ್ಟಿದೆ. ನಗರ ಪ್ರದೇಶಗಳಿಂದ ರಜಾ ದಿನ, ಬೆಳಿಗ್ಗೆ–ಸಂಜೆ ದ್ವಿಚಕ್ರ ವಾಹನಗಳು, ಕಾರುಗಳಲ್ಲಿ ದಾಂಗುಡಿ ಇಡುವ ಯುವಕ–ಯುವತಿಯರ ಮೋಜಿನಾಟಕ್ಕೆ ಲಂಗು ಲಗಾಮು ಇಲ್ಲದಂತಾಗಿದೆ. ಪಿಕಪ್ ಅಣೆಕಟ್ಟೆ ಮೇಲ್ಭಾಗ, ಕೆಳಭಾಗ, ಜಲಧಾರೆಯ ಪ್ರದೇಶ ಮೋಜಿನಾಟದ ಕೇಂದ್ರಗಳಾಗಿವೆ. ದಿನವಿಡೀ ಮೋಜು–ಮಸ್ತಿ ಮಾಡಿ ಬಿಯರ್, ನೀರಿನ ಬಾಟಲು, ಅಳಿದುಳಿದ ತಿಂಡಿ, ಊಟದ ಪೊಟ್ಟಣ, ಪೇಪರ್ ಕಪ್, ಪ್ಲಾಸ್ಟಿಕ್ ಹಾಳೆ, ಚೀಲ ಎಸೆದು ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.