ನ್ಯೂಸ್ ನಾಟೌಟ್: ನಟ ದರ್ಶನ್ ಬೆನ್ನು ನೋವಿನ ಕಾರಣ ನಿಡಿ ಮಧ್ಯಂತರ ಜಾಮೀನು ಪಡೆದಿದ್ದರು. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲಿಯೇ ಇದ್ದರು. ಈಗ ಸಂಪೂರ್ಣ ಜಾಮೀನು ಸಿಗುತ್ತಿದ್ದಂತೆ ಗುಣಮುಖರಾದಂತೆ ಕಾಣಿಸುತ್ತಿದೆ. ಅವರು ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಇಂದು(ಡಿ.16) ಡಿಸ್ಚಾರ್ಜ್ ಆಗಿದ್ದಾರೆ.
ದರ್ಶನ್ ಗೆ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುತ್ತದೆ ಎಂದು ವೈದ್ಯರು ಈ ಹಿಂದೆ ಕೋರ್ಟ್ ಗೆ ವರದಿ ನೀಡಿದ್ದರು. ಇದೇ ವರದಿ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದರು ಎನ್ನಲಾಗಿದೆ. ಒಂದೂವರೆ ತಿಂಗಳು ಕಳೆದರೂ ದರ್ಶನ್ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ‘ಬಿಪಿ ಕಾರಣಕ್ಕೆ ಶಸ್ತ್ರಚಿಕಿತ್ಸೆ ಆಗಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಈಗ ದರ್ಶನ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇಂದು ಮಧ್ಯಾಹ್ನ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಆಪ್ತ ಧನ್ವಿರ್ ಬಂದಿದ್ದರು. ಆ ಬಳಿಕ ಅವರು ಡಿಸ್ಚಾರ್ಜ್ ಆಗಿ ಕಾರನಲ್ಲಿ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ಮನೆಗೆ ತೆರಳಿದ್ದಾರೆ. ಬಳಿಕ ಕೋರ್ಟ್ ಗೆ ತೆರಳಿ ಜಾಮೀನು ಬಾಂಡ್ ಗೆ ಸಹಿ ಮಾಡಿದ್ದಾರೆ. ‘ಅವರ ಬೆನ್ನು ನೋವು ಈಗ ಎಲ್ಲಿ ಹೋಯಿತು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Click