ನ್ಯೂಸ್ ನಾಟೌಟ್ : ರೇಣುಕಾಸ್ವಾಮಿ ಪ್ರಕರಣದ ತನಿಖೆ ವೇಳೆ ಪೊಲೀಸರು ಜಪ್ತಿ ಮಾಡಿರುವ 40.4 ಲಕ್ಷ ರೂ. ವಾಪಸ್ ಕೊಡುವಂತೆ ಸಿಸಿಎಚ್ 57ನೇ ನ್ಯಾಯಾಲಯಕ್ಕೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಹಣದ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೂಡ ಕಣ್ಣಿಟ್ಟಿದ್ದು, ಹಣ ನಮಗೆ ಒಪ್ಪಿಸಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಆರೋಪಿ ನಟ ದರ್ಶನ್ ನಿವಾಸದಲ್ಲಿ 37.40 ಲಕ್ಷ ರೂ. ಜಪ್ತಿ ಮಾಡಿದ್ದರು. ಜತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ನೀಡಿದ್ದ 3 ಲಕ್ಷ ರೂ. ಪೊಲೀಸರಿಗೆ ಒಪ್ಪಿಸಿದ್ದರು. ಈ ಮೊತ್ತವನ್ನು ನಟ ದರ್ಶನ್, ರೇಣುಕಾಸ್ವಾಮಿ ಪ್ರಕರಣದ ಸಾಕ್ಷ್ಯ ನಾಶ ಹಾಗೂ ಇನ್ನಿತರೆ ಕೆಲಸಗಳಿಗೆ ವಿನಿಯೋಗಿಸಲು ಮನೆಯಲ್ಲಿ ತಂದಿಟ್ಟುಕೊಂಡಿದ್ದರು ಎಂದು ಚಾರ್ಚ್‌ಶೀಟ್‌ನಲ್ಲಿ ಆರೋಪಿಸಲಾಗಿತ್ತು.
” ಪೊಲೀಸರು ನನ್ನ ಮನೆ ಹಾಗೂ ಪತ್ನಿಯಿಂದ ಪಡೆದಿರುವ 40.40 ಲಕ್ಷ ರೂ.ಗಳಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಸ್ವಂತ ದುಡಿಮೆಯ ಈ ಹಣ ಮನೆಯಲ್ಲಿಟ್ಟಿದ್ದೆ. ಈ ನಿಟ್ಟಿನಲ್ಲಿ ನನ್ನ ದಿನನಿತ್ಯದ ಖರ್ಚು, ಆರೋಗ್ಯ ಸೇರಿದಂತೆ ಇತರ ತುರ್ತು ಅಗತ್ಯಕ್ಕಾಗಿ ಪೊಲೀಸರ ವಶದಲ್ಲಿರುವ 40.40 ಲಕ್ಷ ರೂ.ಬಿಡುಗಡೆ ಮಾಡಿಸಿಕೊಡಬೇಕು ಎಂದು ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದಾರೆ. ದರ್ಶನ್ ಸಲ್ಲಿಸಿರುವ ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಗೆ ನ್ಯಾಯಾಲಯ ಸೂಚಿಸಿದೆ.
ಮತ್ತೊಂದೆಡೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿರುವ ಹಣದ ಕುರಿತು ವಿಸ್ತೃತ ತನಿಖೆ ಅಗತ್ಯವಿದ್ದು, ಈ ಹಣವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆಯೂ ಪ್ರತ್ಯೇಕ ಅರ್ಜಿ ಸಲ್ಲಿಸಿದೆ. ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಲ್ಲಿಸಿರುವ ಹಣದ ಮೂಲ ಹಾಗೂ ಅಧಿಕೃತತೆ ಕುರಿತು ತನಿಖೆ ನಡೆಯಬೇಕಿದೆ ಎಂದು ಐಟಿ ಅಧಿಕಾರಿಗಳು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅರ್ಜಿಗೆ ನಟ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
Click