ನ್ಯೂಸ್ ನಾಟೌಟ್: ನನ್ನ ಮದುವೆಗೆ ದರ್ಶನ್ ಅವರು ಬಂದರೆ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.
ಫೆ.15 ಮತ್ತು 16ರಂದು ಡಾಲಿ ಧನಂಜಯ್ ಮದುವೆ ಹಿನ್ನೆಲೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮದುವೆಗೆ ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನ ಕರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ರವರು ಸಿಗುತ್ತಿಲ್ಲ. ದರ್ಶನ್ ಅವರು ನನ್ನ ಮದುವೆಗೆ ಬಂದರೆ ನನಗೆ ಸಂತೋಷ” ಎಂದರು.
ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಡೆಯಲಿರುವ ಮದುವೆ ಕುರಿತು ಪ್ರತಿಕ್ರಿಯಿಸಿ, ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಎಲ್ಲವೂ ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದು ಹೇಳಿದರು.
ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಎಲ್ಲರೂ ನೇರವಾಗಿ ಬಂದು ನನಗೆ ಆಶೀರ್ವಾದ ಮಾಡಿ ಹೋಗಬಹುದು. ವಿದ್ಯಾಪತಿ ದ್ವಾರ ಮೂಲಕ ಅಭಿಮಾನಿಗಳಿಗೆ ಎಂಟ್ರಿ ಇರುತ್ತದೆ. ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನೂ ಮದುವೆಗೆ ಕರೆದಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ ಎಂದು ಹೇಳಿದ್ದಾರೆ.