ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಕಾರಿನ ಮೇಲೆಯೇ ಕುಳಿತು ಯುವಕರ ತಂಡವೊಂದು ಪುಂಡಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವಕರನ್ನು ಹಿಡಿದು ಸುಳ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಕೆಲ ದಿನಗಳ ಹಿಂದೆ ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿದ್ದ 7 ಜನರಲ್ಲಿ 6 ಮಂದಿ ಹುಚ್ಚಾಟ ಮೆರೆದಿದ್ದರು.ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಡಿಯೋವನ್ನು ಗಮನಿಸಿದಾಗ ಕಾರಿನಲ್ಲಿ ಮೇಲ್ಭಾಗ ತೆರೆದುಕೊಂಡಿದ್ದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ಬಂದ್ದಿದ್ದರು. ಇಬ್ಬರು ಹಿಂದಿನ ಸೀಟಿನ ಎಡ ಹಾಗೂ ಬಲ ಬದಿಯ ಡೋರ್ ಭಾಗದಿಂದ ಮೇಲೆ ಬಂದಿದ್ದರು. ಇಬ್ಬರು ಮುಂದಿನ ಡೋರ್ ನ ಭಾಗದಿಂದ ಮೇಲೆದ್ದು ನಿಂತು ಹುಚ್ಚಾಟ ಮೆರೆದಿದ್ದರು.ಈ ವಿಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ಸುಳ್ಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.ಈ ರೀತಿ ಭೇಜವಾಬ್ದಾರಿಯಿಂದ ವರ್ತಿಸಿರುವ ಕಾರಿನಲ್ಲಿದ್ದ ಈ ಯುವಕರ ತಂಡವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರೆಂದು ತಿಳಿದು ಬಂದಿದೆ. ಕಾರಿನಲ್ಲಿ 7 ಮಂದಿ ಇದ್ದು ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಪುಂಡಾಟ ಮೆರೆದಿದ್ದಾರೆ. ಸಾಜೀಲ್ ಎಂಬಾತ ಕಾರನ್ನು ಚಾಲನೆ ಮಾಡುತ್ತಿದ್ದು, ಅತೀಫ್, ಸುಮನ್, ಜಯೇಶ್, ಸಾಜೀಬ್, ಸಾಹಿಬಝ್, ಹಸನ್ ಎಂಬವವರು ಕಾರಿನ ಮೇಲೆ ಹುಚ್ಚಾಟ ಮೆರೆದವರು ಎಂದು ತಿಳಿದುಬಂದಿದೆ. ಕೃತ್ಯ ಎಸಗಿದವರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.