ಕರಾವಳಿಕ್ರೈಂ

ಪೋಷಕರೆ ಎಚ್ಚರ! ಮಂಗಳೂರಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ !

ನ್ಯೂಸ್ ನಾಟೌಟ್: ಮಂಗಳೂರು ಮೂಲದ ಕಾಲೇಜೊಂದರಲ್ಲಿ ತನ್ನ ಮಗನ ಮೆಡಿಕಲ್ ವ್ಯಾಸಾಂಗದ ಕನಸು ಈಡೇರಿಸಲು ಸೀಟಿಗಾಗಿ ಹುಡುಕಾಡುತ್ತಿದ್ದ ಪೋಷಕರಿಗೆ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಮಹಿಳೆಯೊಬ್ಬರು ಕಳೆದ ವರ್ಷ ಡಿಸೆಂಬರ್ 16ರಂದು ಕರೆ ಮಾಡಿದ್ದರು. ತಾನು 50 ಲಕ್ಷ ರೂ. ಒಳಗಿನ ಸೀಟುಗಳನ್ನು ಹುಡುಕುತ್ತಿದ್ದೇನೆ ಎಂದು ವಿದ್ಯಾರ್ಥಿ ತಂದೆ ಆ ಮಹಿಳೆಗೆ ಪ್ರತಿಕ್ರಿಯಿಸಿದ್ದಾರೆ.

ಇದಾದ ನಂತರ ಇನ್ನೊಬ್ಬ ಮಹಿಳೆಯಿಂದ ಸೀಟಿನ ವಿವರಗಳನ್ನು ತಿಳಿಸಲು ಕರೆ ಬಂದಿದ್ದು, ಮುಂದಿನ ಪ್ರಕ್ರಿಯೆಗೆ ಹೋಗುವ ಮುನ್ನ ಕ್ಯಾಪಿಟೇಶನ್ ಶುಲ್ಕವಾಗಿ 15 ಲಕ್ಷ ರೂ.ಗಳನ್ನು ಮತ್ತು ಮೊದಲ ವರ್ಷದ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿರುವುದಾಗಿ, ಇದರ ಜೊತೆಗೆ ಹಾಸ್ಟೆಲ್ ಉಚಿತವಾಗಿರುತ್ತದೆ ಮತ್ತು ದಾಖಲೆಗಳನ್ನು ವಾಟ್ಸ್​ಆ್ಯಪ್ ಮೂಲಕ ಕಳುಹಿಸುವಂತೆ ಸೂಚಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೈಬರ್ ಖದೀಮರ ಮಾತನ್ನು ನಂಬಿದ ವಿದ್ಯಾರ್ಥಿಯ ತಂದೆ,ಡಿಸೆಂಬರ್ 17 ರಂದು ತನ್ನ ಹೆಂಡತಿಯ ಬ್ಯಾಂಕ್ ಖಾತೆಯಿಂದ 7.5 ಲಕ್ಷ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಪಡೆದು ಅದರ ಫೋಟೋವನ್ನು ವಾಟ್ಸ್​​ಆ್ಯಪ್​ನಲ್ಲಿ ಹಂಚಿಕೊಂಡರು. ಮರುದಿನ ತನ್ನ ಮಗನ ದಾಖಲೆಗಳ ಫೋಟೋಗಳನ್ನು ಕಳುಹಿಸಿದರು. ಡಿಸೆಂಬರ್ 20ರಂದು ಹಿರಿಯ ಅಧಿಕಾರಿಯೊಬ್ಬರ ಸೋಗಿನಲ್ಲಿ ಕರೆ ಬಂದಿದ್ದು, ವೈದ್ಯಕೀಯ ಸೀಟು ಖಚಿತವಾಗಿದೆ. ಡಿಸೆಂಬರ್ 21ರಂದು ಕಾಲೇಜಿಗೆ ಬರುವಂತೆ ತಿಳಿಸಿದ್ದರು ಎನ್ನಲಾಗಿದೆ.

ಅದರಂತೆ, ವಿದ್ಯಾರ್ಥಿ ಮತ್ತು ಆತನ ತಂದೆ ಕಾಲೇಜಿಗೆ ಭೇಟಿ ನೀಡಿದಾಗ ಓರ್ವ ವ್ಯಕ್ತಿ ಇವರ ಬಳಿ ಬಂದು ಹೊಟೇಲ್​​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈಗಾಗಲೇ ಪ್ರವೇಶವನ್ನು ದೃಢಪಡಿಸಿದ್ದರಿಂದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಲು ಕೇಳಲಾಯಿತು. ಆ ವ್ಯಕ್ತಿ ದಾಖಲೆಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಯ ತಂದೆ ಫಾರ್ಮ್​​ಗಳನ್ನು ಭರ್ತಿ ಮಾಡಿ ತನ್ನ ಮಗನ ಫೋಟೋ ಮತ್ತು 7.5 ಲಕ್ಷ ರೂ.ಗಳ ಡಿಡಿಯನ್ನು ಲಗತ್ತಿಸಿ ಉಳಿದ ಹಣವನ್ನು ಅವರಿಗೆ ಒಪ್ಪಿಸಿ ಮನೆಗೆ ಮರಳಿದ್ದಾರೆ.

ಆದರೆ ಜನವರಿ 5 ರಂದು ವಿದ್ಯಾರ್ಥಿ ಕಾಲೇಜಿಗೆ ತಲುಪಿ ಪ್ರವೇಶ ಪತ್ರದ ಸಾಫ್ಟ್ ಕಾಪಿಯನ್ನು ತೋರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬರುತ್ತದೆ.

ಘಟನೆ ಬಗ್ಗೆ ಮಾತನಾಡಿದ ಡಿಸಿಪಿ ಅಂಶು ಕುಮಾರ್, “ಪಿಜಿ ಸೀಟ್ ಆಕಾಂಕ್ಷಿಯೊಬ್ಬರು ಸಹ ಮೋಸಹೋಗಿದ್ದು, ಸುಮಾರು 50 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಎರಡೂ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಕಾರ್ಯವಿಧಾನವು ಒಂದೇ ಆಗಿದ್ದು, ಶೀಘ್ರವಾಗಿ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.

Related posts

ಅಮ್ಮನನ್ನು ನೋಡಲು ಜೈಲಿನ ಹೊರಗೆ ನಿಂತು ಗೋಗರೆದದ್ದೇಕೆ ಪುಟ್ಟ ಬಾಲಕಿ? ಏನಿದು 9 ರ ಬಾಲಕಿಯ ಕರುಳು ಹಿಂಡುವ ಕಥೆ? ಇಲ್ಲಿದೆ ವೈರಲ್ ವಿಡಿಯೋ

ನಟ ಚೇತನ್‌ ಅಹಿಂಸಾ ಬಂಧನ

ಮುರುಘಾಶ್ರೀ ಯಾರೂ ಕ್ಷಮಿಸಲಾರದ ತಪ್ಪು ಮಾಡಿದ್ದಾರೆ: ಮಾಜಿ ಸಿಎಂ