ನ್ಯೂಸ್ ನಾಟೌಟ್: ಪೊಲೀಸರಿಂದ ಕಾಂತಾರದ ದೈವದ ರೀತಿ ವರ್ತಿಸಿ ಪೊಲೀಸರಿಂದ ಬಚಾವ್ ಆದೆ ಎಂದು ಮಾಜಿ ಸಚಿವ, ಹಾಲಿ ಎಂಎಲ್ ಸಿ ಸಿಟಿ ರವಿ ತಿಳಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆಂದು ಸಿಟಿ ರವಿ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಸಿಟಿ ರವಿ ಅವರನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪೊಲೀಸರು ನನ್ನ ಬಳಿಯ ಫೋನ್ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಾಂತಾರದ ದೈವದ ರೀತಿಯಲ್ಲಿ ಕೆಲವು ಸಲ ವರ್ತನೆ ಮಾಡಿದೆ. ಹೀಗಾಗಿ ನನ್ನ ಪೋನ್ ಕಿತ್ತುಕೊಳ್ಳಲು ಪೊಲೀಸರಿಗೆ ಆಗಲಿಲ್ಲ ಎಂದು ಮಾಜಿ ಸಚಿವ, ಎಂಎಲ್ಸಿ ಸಿಟಿ ರವಿ ಹೇಳಿದರು. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ಹಲ್ಲೆ ಆಗಿರುವುದಕ್ಕೆ ವಿಡಿಯೋ ಇದೆ. ನನ್ನ ಮೇಲೆ ಮಾಡಿದ ಆರೋಪ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದ್ದಂತೆ. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ ಎಂದರು.
ರಾತ್ರಿ ಸುತ್ತಾಡುವಾಗ ಪೊಲೀಸರು ವಾಕಿ-ಟಾಕಿಯಲ್ಲಿ ಕಡಿಮೆ ಮಾತನಾಡುತ್ತಿದ್ದರು, ಪೋನ್ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಕೆಲವು ಕರೆ ಸೇವ್ ಆಗಿರುವ ನಂಬರಗಳಿಂದ, ಕೆಲವು ಕರೆ ನಂಬರಗಳಿಂದ ಬರುತ್ತಿದ್ದವು. ನನ್ನ ಜೊತೆ ಸ್ಕಾರ್ಪಿಯೋದಲ್ಲಿ ರಾಮದುರ್ಗ ಡಿವೈಎಸ್ಪಿ ಚಿದಂಬರ್, ಬೆಳಗಾವಿ ಮಾರ್ಕೆಟ್ ಠಾಣೆ ಎಸ್ಐ ಗಂಗಾಧರ್, ಕಿತ್ತೂರು ಎಸ್ಐ ಇದ್ದರು ಎಂದು ತಿಳಿಸಿದರು.
ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ, ಎಸ್ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್ ಕಾಲ್ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ರಾತ್ರಿ ನನ್ನ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದರು. ಆಗ ಏನಾದರೂ ತಿನ್ನಿ ಸಾರ್ ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಎಂದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ವೈದ್ಯರಿಗೆ ಪೆಟ್ಟು ಬಿದ್ದಿರುವ ಜಾಗ ತೋರಿಸಿದೆ. ಲಿವರ್ಗೆ ಸ್ವಲ್ಪ ಪೆಟ್ಟು ಬಿದ್ದಿದೆ ಸ್ಕ್ಯಾನಿಂಗ್ ಮಾಡೋಕೆ ವೈದ್ಯರು ಹೇಳಿದರು. ನಂತರ ನನ್ನ ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು ಎಂದು ತಿಳಿಸಿದರು.
ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು ಪ್ಲಾನ್ ಮಾಡಿದ್ದರಾ ಅಂತ ನನಗೆ ಅನುಮಾನವಿದೆ. ಏನೋ ಸಂಚು ಮಾಡಿದ್ದರು ಎಂಬ ಬಗ್ಗೆ ನನಗೆ ಅನುಮಾನ ಇದೆ. ಗೃಹ ಸಚಿವರ ಹಿಡಿತದಲ್ಲೇ ಗೃಹ ಇಲಾಖೆ ಇದೆಯಾ ಎಂಬ ಅನುಮಾನ ಇದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.