ಮಡಿಕೇರಿ: ಕೊಡಗಿನ ರಮ್ಯ ತಾಣವನ್ನು ವೀಕ್ಷಿಸುವುದಕ್ಕಾಗಿ ಬಂದಿದ್ದ ಹುಡುಗಿಯೊಬ್ಬಳು ಅನಿಲ ಸೋರಿಕೆಯಿಂದಾಗಿ ಹೆಣವಾಗಿ ಹೋದ ದುರ್ಘಟನೆ ನಡೆದಿದೆ. ಮುಂಬೈನ ಖಾಸಗಿ ಸಂಸ್ಥೆಯ ಉದ್ಯೋಗಿ ಬಳ್ಳಾರಿಯ ವಿಘ್ನೇಶ್ವರಿ ಮೃತಪಟ್ಟವರು. ಕೂರ್ಗ್ ವ್ಯಾಲಿ ವ್ಯೂ ಹೋಂ ಸ್ಟೇನಲ್ಲಿ ನಲ್ಲಿ ದುರಂತ ಸಂಭವಿಸಿದೆ. ಇದನ್ನು ಅಕ್ರಮವಾಗಿ ನಡೆಸುತ್ತಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿದ್ದು ವಿವಾದಕ್ಕೆ ಕಾರಣವಾಗಿದೆ. ಕೊಡಗಿನಾದ್ಯಂತ ಅಕ್ರಮ ಹೋಮ್ ಸ್ಟೇಗಳು ತಲೆ ಎತ್ತಿದ್ದು ಹಲವು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಅನ್ನುವ ಆಕ್ರೋಶವೂ ಸ್ಥಳೀಯರಿಂದ ವ್ಯಕ್ತವಾಗಿದೆ.
ಏನಿದು ಘಟನೆ?
ವಿಘ್ನೇಶ್ವರಿ ತಮ್ಮ ಗೆಳತಿಯರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಅಂತೆಯೇ ತಲಕಾವೇರಿಗೂ ಭೇಟಿ ನೀಡಿದ್ದರು. ಈ ವೇಳೆ ಅವರು ಕೂರ್ಗ್ ವ್ಯಾಲಿ ವ್ಯೂ ಹೋಂ ಸ್ಟೇನಲ್ಲಿ ರಾತ್ರಿ ತಂಗಿದ್ದರು. ಅಂದು ರಾತ್ರಿ ಸ್ನಾನಕ್ಕೆಂದು ಹೋಗಿದ್ದ ವಿಘ್ನೇಶ್ವರಿ ತುಂಬಾ ಹೊತ್ತಾಗಿದ್ದರೂ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಯಾದ ನಾಲ್ವರು ಸ್ನೇಹಿತೆಯರು ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಅಲ್ಲಿ ಅಸ್ವಸ್ಥಗೊಂಡು ಸ್ಥಿತಿಯಲ್ಲಿ ಬಿದ್ದಿದ್ದ ವಿಘ್ನೇಶ್ವರಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾಗಲೇ ಆಕೆಯ ಪ್ರಾಣ ಹೋಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಹೋಮ್ ಸ್ಟೇ ಮಾಲಿಕ ಅಕ್ರಮವಾಗಿ ಇದನ್ನು ನಡೆಸುತ್ತಿದ್ದ ಎನ್ನಲಾಗಿದೆ. ವಿದೇಶದಲ್ಲಿದ್ದುಕೊಂಡು ಪರವಾನಗಿ ಪಡೆಯದೆ ಅಕ್ರಮವಾಗಿ ಹೋಮ್ ಸ್ಟೇ ನಡೆಸುತ್ತಿದ್ದ ಎನ್ನಲಾಗಿದೆ. ಆತನ ವಿರುದ್ಧ ಕೇಸ್ ದಾಖಲಾಗಿದೆ.