ನ್ಯೂಸ್ ನಾಟೌಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಆ ಬಳಿಕ ಸರಣಿಯ ಎರಡನೇ ಪಂದ್ಯವು ಫೆಬ್ರವರಿ 9 ರಂದು ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯದ ಆಫ್ ಲೈನ್ ಟಿಕೆಟ್ ಗಳ ಮಾರಾಟ ಇಂದಿನಿಂದ ಪ್ರಾರಂಭವಾಗಿದೆ. ಆದರೆ ಟಿಕೆಟ್ ಖರೀದಿಸುವ ಸಮಯದಲ್ಲಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ ಅನೇಕ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ, ಎರಡನೇ ಏಕದಿನ ಪಂದ್ಯದ ಟಿಕೆಟ್ ಗಳನ್ನು ಖರೀದಿಸಲು ಸಾಕಷ್ಟು ಕ್ರಿಕೆಟ್ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಕೆಲವು ಅಭಿಮಾನಿಗಳು ಟಿಕೆಟ್ ಗಾಗಿ ಕೌಂಟರ್ ಹತ್ತಲು ಪ್ರಾರಂಭಿಸಿದರು, ಇದರಿಂದಾಗಿ ಪೊಲೀಸರನ್ನು ಕರೆಯಬೇಕಾಯಿತು. ಇದರಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಮಾಧ್ಯಮ ವರದಿಗಳ ಪ್ರಕಾರ, ಭಾರಿ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.
ವರದಿಗಳ ಪ್ರಕಾರ, ಈ ಕಾಲ್ತುಳಿತದಲ್ಲಿ ಸುಮಾರು 10 ಜನರು ಅಸ್ವಸ್ಥರಾಗಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.