ಮಂಗಳೂರು: ಕೊರೊನಾ ಅಟ್ಟಹಾಸದಿಂದಾಗಿ ಬರೋಬ್ಬರಿ ಎರಡೂವರೆ ತಿಂಗಳುಗಳ ಕಾಲ ದೇವಾಲಯಗಳ ಬಾಗಿಲು ಮುಚ್ಚಿತ್ತು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ದೇಗುಲಗಳ ಬಾಗಿಲು ತೆರೆಯಲು ಸರಕಾರ ಅನುಮತಿ ನೀಡಿತ್ತು. ಮಾತ್ರವಲ್ಲ
ಕಳೆದ ಒಂದು ವಾರದಿಂದ ದೇವಾಲಯಗಳಲ್ಲಿ ದೇವರ ಸೇವೆಗೆ ಅನುಮತಿ ನೀಡಲಾಗಿತ್ತು. ಇದೀಗ ಭಕ್ತಾದಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ಸೇವೆಗಳಿಗೂ ನಿರ್ಬಂಧ ಹೇರಲಾಗಿದೆ. ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಕೋವಿಡ್-19 ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಈ ಕ್ಷೇತ್ರಗಳಲ್ಲಿ ಮುಂದಿನ ಆದೇಶದವರೆಗೆ ಭಕ್ತಾಧಿಗಳಿಗೆ ದೇವರ ಸೇವೆಯನ್ನು ನಿಷೇಧಿಸಲಾಗಿದೆ. ದ.ಕ ಜಿಲ್ಲೆಯಲ್ಲಿನ ಪ್ರಮುಖ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ನಾಳೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಪ್ರಮುಖ ದೇವಸ್ಥಾನಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣ ಹೆಚ್ಚಾಗಲು ಕಾರಣ ಆಗಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ದೇವಸ್ಥಾನಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ.
ದರ್ಶನಕ್ಕೆ ಮಾತ್ರ ಅನುಮತಿ: ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ಸೇವೆಗಳಿಗೂ ನಿರ್ಬಂಧ ಹೇರಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ ಪೂಜೆ, ಆಶ್ಲೇಷಬಲಿ, ನಾಗಪ್ರತಿಷ್ಟೆ ಸೇರಿದಂತೆ ಎಲ್ಲಾ ಸೇವೆಗಳನ್ನೂ ನಿಷೇಧಿಸಲಾಗಿದೆ. ಇವುಗಳಲ್ಲಿ ಸರ್ಪಸಂಸ್ಕಾರ ಸೇವೆಯನ್ನು ಭಕ್ತಾಧಿಗಳು ಆನ್ ಲೈನ್ ಮೂಲಕವೇ ಬುಕ್ ಮಾಡಿ, ಕ್ಷೇತ್ರ ನಿಗದಿಪಡಿಸುವ ದಿನಾಂಕದಂದು ಸೇವೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸೇವೆಯ ದಿನಾಂಕವನ್ನು ಕಾಯ್ದಿರಿಸಿದ ಭಕ್ತಾಧಿಗಳಿಗೂ ಈ ಮಾರ್ಗಸೂಚಿ ಅನ್ವಯವಾಗುತ್ತದೆ.