ಕೊಡಗು

ಶ್ರೀನಗರದಲ್ಲಿ ಹಿಮಪಾತ: ಕೊಡಗಿನ ಯೋಧ ಹುತಾತ್ಮ

802

ವಿರಾಜಪೇಟೆ: ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಹಿಮಪಾತದಿಂದ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮ್ಮದ್ (37) ಹುತಾತ್ಮರಾಗಿದ್ದಾರೆ. ಬುಧವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಪಟ್ಟಣದ ಸೇಂಟ್ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ಬಳಿಕ, ಸೇನಾ ನೇಮಕಾತಿ ಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಪಟ್ಟಣದ ಮೀನುಪೇಟೆಯಲ್ಲಿ ವಾಸವಾಗಿದ್ದ ದಿ.ಉಮ್ಮರ್ ಮತ್ತು ಆಶೀಯಾ ದಂಪತಿ ಪುತ್ರ ಅಲ್ತಾಫ್ ಅಹಮ್ಮದ್. ಅಲ್ತಾಫ್ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಬುಧವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳುವ ಮೊದಲು ಅಲ್ತಾಫ್ ಅವರು ತಾಯಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದರು. ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ವಿರಾಜಪೇಟೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಹುತಾತ್ಮ ಯೋಧ ಅಲ್ತಾಫ್ ಅಹಮ್ಮದ್ ಅವರು ಫೆ.೧೪ರಂದು ಕಳುಹಿಸಿದ್ದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ಹಂಚಿಕೆಯಾಗುತ್ತಿದೆ. ‘ದೇಶದ ಬಗ್ಗೆಯು ಕೊಂಚ ಕಾಳಜಿ ವಹಿಸಿ. ಎಷ್ಟೋ ಯೋಧರು ನಿಮ್ಮ ಒಳಿತಿಗಾಗಿ, ದೇಶಕ್ಕಾಗಿ ಬಲಿದಾನವನ್ನು ಮಾಡುತ್ತಿದ್ದಾರೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡಬೇಡಿ, ಜಾತಿ-ಧರ್ಮದ ಹೆಸರಿನಲ್ಲಿ ಗಲಾಟೆ ಮಾಡಿಕೊಳ್ಳಬೇಡಿ. ಹಿಜಾಬ್- ಕೇಸರಿ ಎಂದು ಹೊಡೆದಾಡದಿರಿ. ಇಂಥದ್ದನ್ನು ನೋಡುವಾಗ ನಮಗಿಲ್ಲಿ ತುಂಬಾ ನೋವಾಗುತ್ತದೆ. ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯಿಂದ ನಾವಿಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ನಿಮ್ಮಲ್ಲಿ ನಿಜವಾದ ದೇಶಪ್ರೇಮವಿದ್ದರೆ, ದಯವಿಟ್ಟು ನಿಮ್ಮ ಮಕ್ಕಳಲ್ಲೂ ದೇಶಪ್ರೇಮವನ್ನು ಬೆಳೆಸಿ ಉತ್ತಮ ಭವಿಷ್ಯದ ದಾರಿಯನ್ನು ತೋರಿಸಿ’ ಎಂದು ಮನವಿ ಮಾಡಿದ್ದ ಆಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

See also  ಸುಬ್ರಹ್ಮಣ್ಯ: ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ,ಅನಾರೋಗ್ಯಕ್ಕೀಡಾಗಿರುವ ಶಂಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget