ನ್ಯೂಸ್ ನಾಟೌಟ್: ಬೆಂಕಿಯಿಂದ ಒಲೆ ಹಚ್ಚಿ ಅಡುಗೆ ಮಾಡೋದನ್ನ ನೋಡಿದ್ದೇವೆ. ಆದರೆ ಬೆಂಕಿಯೇ ಇಲ್ಲದೆ ಅಡುಗೆ ಮಾಡೋದನ್ನು ನೀವು ಎಲ್ಲಾದರೂ ನೋಡಿದ್ದೀರಾ..? ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ನೆಹರೂ ಮೆಮೋರಿಯಲ್ ಕಾಲೇಜು (NMC ) ನಲ್ಲಿ ವಿದ್ಯಾರ್ಥಿಗಳು ಬೆಂಕಿ ರಹಿತವಾಗಿ ರುಚಿರುಚಿಯಾದ ಅಡುಗೆಯನ್ನು ಮಾಡಿದ್ದಾರೆ.
ಕಲಿಕೆಯ ಜೊತೆಗೆ ಇಂತಹ ಪ್ರಾಕ್ಟಿಕಲ್ ವರ್ಕ್ ನಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಹೊಸತನವನ್ನು ಕಲಿತಿದ್ದಾರೆ. ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಏಪ್ರಿಲ್ 20 ಶನಿವಾರದಂದು “ಫ್ಲೇಮ್ ಲೆಸ್ ಫೀಸ್ಟ್” ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಆಯೋಜಿಸಲಾಗಿತ್ತು.. ಭಾಗವಹಿಸುವ ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳಾಗಿ ವಿಭಜಿಸಲಾಯಿತು. ತಮ್ಮದೇ ಆದ ಪದಾರ್ಥಗಳು, ಪಾತ್ರೆಗಳು ಮತ್ತು ಉಪಕರಣಗಳನ್ನು ಬಳಸಿ ರುಚಿಯಾದ ಆಹಾರವನ್ನು ತಯಾರಿಸಲು ಮತ್ತು ಪ್ರಸ್ತುತಪಡಿಸಲು ಒಂದು ಗಂಟೆಗಳ ಕಾಲಾವಕಾಶ ನೀಡಲಾಯಿತು.
ಮಕ್ಕಳು ತಯಾರಿಸಿದ ಆಹಾರಗಳನ್ನು ನೈರ್ಮಲ್ಯ, ರುಚಿ, ಪ್ರಸ್ತುತಿ ಮತ್ತು ವೈವಿದ್ಯತೆ ಎಂಬ ನಾಲ್ಕು ವಿಭಾಗಗಳ ಮೇಲೆ ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದೊಂದಿಗೆ ಭಾಗವಹಿಸಿದರು. ಸೀಮಿತ ಅವಧಿ ಮತ್ತು ಸಂಪನ್ಮೂಲಗಳಿಂದ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. ಹಣ್ಣಿನ ರಸ , ಸ್ಯಾಂಡ್ ವಿಚ್,ಚುರುಮುರಿ, ಅವಿಲ್ ಮಿಲ್ಕ್, ಫ್ರುಟ್ ಸಲಾಡ್ ಇನ್ನು ಹಲವಾರು ಆಹಾರ ಖಾದ್ಯಗಳನ್ನು ಸಿದ್ಧಪಡಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಎ ಎನ್, ಹಿಂದಿ ಉಪನ್ಯಾಸಕಿ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಎ ವಿ ಸಹಕರಿಸಿದರು. ನೇಚರ್ ಕ್ಲಬ್ ಕಾರ್ಯದರ್ಶಿ ಪವಿತ್ರಾಕ್ಷಿ, ಕೋಶಾಧಿಕಾರಿ ಮಧಿವಧಿನಿ, ಸ್ಪರ್ಧಾ ಸಮಿತಿ ಸಂಚಾಲಕಿ ಮಹಿಮಾ, ಕೀರ್ತಿಕಾ, ಲಿಖಿತ, ಯಶಿಕಾ ಮತ್ತು ಕ್ಲಬ್ ನ ಇನ್ನಿತರ ಸದಸ್ಯರು ಸ್ಪರ್ಧೆಯನ್ನು ಆಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಮತ್ತು ಉಪನ್ಯಾಸಕರಾದ ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮಾರ್ಗದರ್ಶನ ನೀಡಿದರು. ಲ್ಯಾಬ್ ಸಹಾಯಕಿ ಸಿಬ್ಬಂದಿ ಭವ್ಯ ಸಹಕರಿಸಿದರು.