ನ್ಯೂಸ್ ನಾಟೌಟ್ : ವಸತಿ ಶಾಲೆಯೊಂದರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಅಡುಗೆ ಸಹಾಯಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಅಡುಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಕಿರುಕುಳ ನೀಡುವುದು ಮತ್ತು ‘ಬ್ಯಾಡ್ ಟಚ್’ ಮಾಡುತ್ತಿದ್ದಾನೆಂದು ವಿದ್ಯಾರ್ಥಿಗಳು ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ದೂರು ಹಾಕಿದ್ದರು. ಸಲಹಾ ಪೆಟ್ಟಿಗೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಮಾಹಿತಿಯು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿದು ಬಂದಿದ್ದು, ಅವರು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಡುಗೆ ಸಹಾಯಕನ ವಿರುದ್ಧ ಡಿ.23ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಸುರಕ್ಷತಾ ನೀತಿ-2016 ಪರಿಷ್ಕಕೃತ-2023’ನ್ನು ಅಳವಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ ‘ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ’ದ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click