ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಹೇಳಿದ ಮಾತುಗಳು ವೈರಲ್ ಆಗುತ್ತಿವೆ. ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರ ಮಾತುಗಳು ನನಗೆ ಬಹಳ ಇಷ್ಟವಾಯ್ತು ಎಂದು ನಟ ತಿಳಿಸಿದ್ದಾರೆ.
ಮಾರ್ಚ್ 1 ರಿಂದ 8ರ ವರೆಗೆ ‘ಸರ್ವ ಜನಾಂಗದ ಶಾಂತಿಯ ತೋಟ’ ಶೀರ್ಷಿಕೆಯಡಿ ಬೆಂಗಳೂರಿನಲ್ಲಿ 16ನೇ ವರ್ಷದ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಆಯೋಜಿಸಲಾಗಿತ್ತು. ನಟ ಕಿಶೋರ್ ಕುಮಾರ್ ಅವರನ್ನು ಚಿತ್ರೋತ್ಸವದ ರಾಯಭಾರಿಯಾಗಿ ಕರ್ನಾಟಕ ಸರ್ಕಾರ ನೇಮಿಸಿದೆ.
ಚಿತ್ರೋತ್ಸವದ ಕೊನೆ ದಿನ ಕಾರ್ಯಕ್ರಮದಲ್ಲಿ ಕಿಶೋರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನಟ ಕಿಶೋರ್, “ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಮಾತುಗಳು ನನಗೆ ಬಹಳ ಇಷ್ಟ ಆಯ್ತು, ಅವರ ರೀತಿ ವ್ಯಕ್ತಿತ್ವ ಇರೋರು ಬಹಳ ಮುಖ್ಯ” ಎಂದು ಹೇಳಿದ್ದಾರೆ.
ಅಲ್ಲದೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ. ಇದೀಗ ನಟನ ಹೇಳಿಕೆಗೆ ಪರ ಮತ್ತು ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.