ನ್ಯೂಸ್ ನಾಟೌಟ್: ಇಡೀ ದೇಶದ ತಲೆಕೆಡಿಸಿದ, ನಿದ್ರೆ ಕೆಡಿಸಿದ, ಚಿತ್ರ ವಿಚಿತ್ರ ಅನುಭವ ಕೊಟ್ಟಿದ್ದು ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣ. ಸದ್ಯ ಈ ಪ್ರಕರಣ ಎಸ್ಐಟಿ (ವಿಶೇಷ ತನಿಖಾ ತಂಡ) ಅಂಗಳದಲ್ಲಿದೆ.
ಮಾಸ್ಕ್ ಮ್ಯಾನ್ ಬುರುಡೆ ಬಿಟ್ಟಿದ್ದಾನೆ, ತಲೆ ಬುರುಡೆಯೂ ಇಲ್ಲ..ಮೂಳೆಯೂ ಇಲ್ಲ, ಇವನು ಸುಮ್ಮನೆ ಜನರ ದಾರಿ ತಪ್ಪಿಸಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ. ನಾವು ಹೇಳಿದ್ದೇ ಸರಿ ಅನ್ನುವ ಸ್ಯಾಟ್ ಲೈಟ್ ಚಾನೆಲ್ ಗಳು ಕೂಡ ಚಿನ್ನಯ್ಯ ಫೇಕ್ ಅಂತ ಗಂಟಲು ಹರಿದುಕೊಂಡು ಕಿರುಚಿಕೊಂಡು ಗಂಟೆಗಟ್ಟಲೆ ಜನರ ತಲೆ ತಿನ್ನುತ್ತಿವೆ. ಈ ಹಂತದಲ್ಲಿ ಎಸ್ಐಟಿ ತನಿಖೆಗೂ ಮೊದಲೇ ಚೆನ್ನಯ್ಯ ಡಿಟಾಕ್ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದಾನೆ.
ಇದು ಮಾಸ್ಕ್ ಮ್ಯಾನ್ ನ ಮೊದಲ ಸಂದರ್ಶನ. ತನಿಖೆಗೂ ಮೊದಲು ನಡೆದಿದ್ದ ಆತನ ಸಂದರ್ಶನವನ್ನು ಗೌಪ್ಯತೆಯ ಹಿನ್ನೆಲೆಯಲ್ಲಿ ಪ್ರಸಾರ ಮಾಡಿರಲಿಲ್ಲ. ಎಸ್ಐಟಿ ಆತನ ವಿವರ ಹೆಸರು ಪ್ರಕಟಿಸಿದ ಬಳಿಕ ಅಂದಿನ ಸಂದರ್ಶನವನ್ನು ಈಗ ಹೊರಗೆ ಬಿಡಲಾಗಿದೆ. ಈ ವಿಡಿಯೋದಲ್ಲಿ ಮಾಸ್ಕ್ ಮ್ಯಾನ್ ಹಲವಾರು ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಸೌಜನ್ಯ , ಆನೆ ಮಾವುತನ ಹಾಗೂ ಸಹೋದರಿಯ ಜೋಡಿ ಕೊಲೆ ಸೇರಿದಂತೆ ಕೆಲವು ಪ್ರಕರಣಗಳು ಇನ್ನೂ ಜೀವಂತವಾಗಿದೆ ಅನ್ನಿಸುತ್ತಿದೆ. ಕಣ್ಣಿಗೆ ಕಾಣದ ಸತ್ಯದ ದರ್ಶನವಾಗಬೇಕು, ಕೊಲೆಯ ಹಿಂದಿರುವ ಆರೋಪಿಗಳು ಬಯಲಿಗೆ ಬರಬೇಕೆನ್ನುವ ಒತ್ತಾಯವೂ ಕೇಳಿ ಬರುತ್ತಿದೆ.