ನ್ಯೂಸ್ ನಾಟೌಟ್: ಒಂದು ಆಧಾರ್ ಸಂಖ್ಯೆಯಲ್ಲಿ ಒಂದು ಅಥವಾ ಎರಡು ಸಿಮ್ ಕಾರ್ಡ್ ಖರೀದಿ ಮಾಡಿ, ಉಪಯೋಗಿಸುತ್ತಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಮ್ಮ ಹೆಸರಿನಲ್ಲಿ ಕಿಡಿಗೇಡಿಗಳು ಸಿಮ್ ಕಾರ್ಡ್ ಖರೀದಿಸಿ ಬಳಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ತಿಳಿಯುವುದು ಹೇಗೆ? ನಮ್ಮ ಆಧಾರ್ ನಲ್ಲಿ ಎಷ್ಟು ಸಿಮ್ ಕಾರ್ಡ್ಗಳು ಚಾಲ್ತಿಯಲ್ಲಿವೆ ಎಂಬುದನ್ನು ಪತ್ತೆಹಚ್ಚುವುದು ಈಗ ಬಹಳ ಸುಲಭ.
ಪ್ರಸ್ತುತ ಕಾಲಘಟ್ಟದಲ್ಲಿ ನಿಮ್ಮ ಅರಿವಿಗೆ ಬಾರದಂತೆ ಯಾರು ಬೇಕಾದರೂ ನಿಮ್ಮ ಯುಐಡಿ ಸಂಖ್ಯೆಯನ್ನು ಬಳಸುವ ಸಾಧ್ಯತೆಗಳಿವೆ. ದೂರಸಂಪರ್ಕ ಇಲಾಖೆ (ಡಿಒಟಿ) TAFCOP ವ್ಯವಸ್ಥೆಯ ಅಡಿಯಲ್ಲಿ ಸಂಚಾರ್ ಸಾಥಿ ಆನ್ ಲೈನ್ ಪೋರ್ಟಲ್ ಮೂಲಕ ಒಂದು ಸಾಧನವನ್ನು ಲಭ್ಯವಾಗುವಂತೆ ಮಾಡಿದೆ. ಇದರ ಸಹಾಯದಿಂದ ನೀವು ಕುಳಿತ ಜಾಗದಿಂದಲೇ ನಿಮ್ಮ ಸ್ಮಾರ್ಟ್ಫೋನ್ ಅಥವಾ ಲಾಪ್ ಟಾಪ್/ ಕಂಪ್ಯೂಟರ್ ನಲ್ಲಿ ಪ್ರಸ್ತುತ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ತಿಳಿಯಬಹುದಾಗಿದೆ.
ಈ ಮೂಲಕ ಬಳಕೆದಾರರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಭಾರತ ಸರ್ಕಾರವು ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ದೇಶಾದ್ಯಂತ 9 ಸಕ್ರಿಯ ಸಿಮ್ ಗಳೊಂದಿಗೆ ಒಂದು ಆಧಾರ್ ಅನ್ನು ನೋಂದಾಯಿಸಬಹುದು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗರಿಷ್ಠವೇ 6. ನಿಮ್ಮ ಮೊಬೈಲ್ ಸಂಖ್ಯೆಗೆ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ತಿಳಿಯಲು ಕೆಳಗೆ ನೀಡಲಾದ ಕ್ರಮಗಳನ್ನು ಅನುಸರಿಸಿ.
- ಸಂಚಾರ್ ಸಾಥಿ ಪೋರ್ಟಲ್ ಗೆ ಕ್ಲಿಕ್ ಮಾಡಿ ( sancharsaathi.gov.in ).
- ಮುಖಪುಟದಲ್ಲಿ, Citizen Centric Services ವಿಭಾಗಕ್ಕೆ ಹೋಗಿ ‘Know Your Mobile Connections’ ಮೇಲೆ ಟ್ಯಾಪ್ ಮಾಡಿ.
- ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒನ್ ಟೈಮ್ ಪಾಸ್‌ವರ್ಡ್ (OTP) ಅನ್ನು ಕೊಡಲಾದ ಬಾಕ್ಸ್ನಲ್ಲಿ ನಮೂದಿಸಿ.
- ಅದಾದ ಬಳಿಕ, ಆಧಾರ್ ಐಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಪರದೆಯ ಮೇಲೆ ಗೋಚರಿಸುತ್ತದೆ.
ನಿಮಗೆ ಸಂಬಂಧಿಸದ ಮೊಬೈಲ್ ಸಂಖ್ಯೆ ಗೋಚರಿಸಿದ್ದರೆ, ಅದನ್ನು ಸಂಪರ್ಕ ಕಡಿತಗೊಳಿಸಿ. ಇದು “ನನ್ನ ಸಂಖ್ಯೆಯಲ್ಲ” ಎಂದು ಫ್ಲ್ಯಾಗ್ ಮಾಡಬಹುದು ಅಥವಾ ನೀವು ಹಳೆಯ ಸಿಮ್ ಹೊಂದಿದ್ದರೆ, ನೀವು ಅದನ್ನು “ಅಗತ್ಯವಿಲ್ಲ” ಎಂದು ಫ್ಲ್ಯಾಗ್ ಮಾಡುವ ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ವರದಿಯ ಆಧಾರದ ಮೇಲೆ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಹೆಸರಿನಲ್ಲಿ 9ಕ್ಕಿಂತ ಅಧಿಕ ಸಿಮ್ ಕಾರ್ಡ್ ನೋಂದಣಿ ಆಗಿದ್ದಲ್ಲಿ, ಕೂಡಲೇ ಸಂದೇಶದ (SMS) ಮೂಲಕ ಎಚ್ಚರಿಕೆ ಗಂಟೆ ನಿಮ್ಮನ್ನು ತಲುಪಲಿದೆ.