ನ್ಯೂಸ್ ನಾಟೌಟ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಾಮಲ್‌ಕಟ್ಟೆ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಧರೆಗೆ ಡಿಕ್ಕಿಯಾಗಿ ಪುತ್ತೂರು ಮೂಲದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಪುತ್ತೂರು ಕೂರ್ನಡ್ಕ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಖತೀಜಹನ (20) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಖತೀಜಹನರ ತಾಯಿ ಸಮೀಮ ಮತ್ತು ಚಾಲಕ ಶಾನ್ ಯಾವುದೇ ಅಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತಾಯಿ ಸಮೀಮಾ ಜೊತೆ ಖತೀಜಹನ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕಾರಿನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭ ರಾಮಲ್‌ಕಟ್ಟೆ ತಲುಪಿದಾಗ ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿ ರಸ್ತೆಗೆ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಬಾಗಿಲು ಕಿತ್ತುಹೋಗಿ ಕಾರಿನ ಒಳಗಿದ್ದ ಖತೀಜಹನ ಹೊರೆಕ್ಕೆಸೆಯಲ್ಟಿಟ್ಟಿದ್ದಾರೆ. ಗಂಭೀರ ಗಾಯಗೊಂಡ ಖತೀಜಹನ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಸಂಚಾರಿ ಠಾಣಾ ಎಸ್.ಐ.ಸುತೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.