ನ್ಯೂಸ್ ನಾಟೌಟ್: ಕೆವಿಜಿ ನರ್ಸಿಂಗ್ ಕಾಲೇಜಿನಲ್ಲಿ ಕಳೆದ 16 ವರ್ಷಗಳಿಂದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ತೀರ ಬಡತನದಲ್ಲಿ ಜೀವನ ನಡೆಸುತ್ತಿದ್ದ ತಿಮ್ಮಪ್ಪ ನಾಯ್ಕ್ ಅವರ ಮನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಅವರ ನೇತೃತ್ವದಲ್ಲಿ ನವೀಕರಣಗೊಳಿಸಿ ಶನಿವಾರ (ಮೇ10) ಹಸ್ತಾಂತರಿಸಲಾಯಿತು.
ತಿಮ್ಮಪ್ಪ ನಾಯ್ಕ್ ಅವರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಸುಳ್ಯ ಸಮೀಪದ ಅರಂಬೂರು ಬಳಿ ವಾಸವಿದ್ದಾರೆ. ಇತ್ತೀಚೆಗೆ ತಿಮ್ಮಪ್ಪ ಅವರ ಬದುಕಿನಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿ ಬಡಿದಪ್ಪಳಿಸಿತ್ತು. ಇದರಿಂದಾಗಿ ಸಾಕಷ್ಟು ಆರ್ಥಿಕ ಹೊಡೆತವನ್ನು ತಿಮ್ಮಪ್ಪ ಅವರ ಕುಟುಂಬ ಅನುಭವಿಸಿತ್ತು. ಇಂಥಹ ಸಂದರ್ಭದಲ್ಲಿ ಮನೆ ನಡೆಸುವುದು ಕೂಡ ಕಷ್ಟವಾಗಿತ್ತು. ಮನೆಯು ತೀರ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ಅಲ್ಲಲ್ಲಿ ಸೋರುವಿಕೆ ಉಂಟಾಗಿ ಮನೆ ಕುಸಿಯುವ ಭೀತಿಯಲ್ಲಿತ್ತು. ಈ ವಿಚಾರವನ್ನು ಕೆವಿಜಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಯುವಕರು ಅಕ್ಷಯ್ ಕೆ.ಸಿ ಅವರ ಗಮನಕ್ಕೆ ತಂದರು.
View this post on Instagram
ತಕ್ಷಣ ಅವರು ಈ ಮನೆಗೆ ಹೊಸ ಕಾಯಕಲ್ಪ ನೀಡುವ ನಿರ್ಧಾರ ತೆಗೆದುಕೊಂಡರು. ಇದಕ್ಕೆ ತಗಲುವ ವೆಚ್ಚವನ್ನು ಕೂಡ ಅಕ್ಷಯ್ ಕೆ.ಸಿ ಅವರು ಭರಿಸಿದರು. ಇವರ ಜೊತೆಗೆ ಹಲವಾರು ಮಂದಿ ಕೆವಿಜಿಯಲ್ಲಿ ಕೆಲಸ ಮಾಡುವ ಯುವಕರು ಕೆಲಸ ನಿರ್ವಹಿಸಿ ಸಹಕಾರ ನೀಡಿದರು. ಈ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ನೀಲಾಂಬಿಕೈ ನಟರಾಜನ್ , ಎಸ್ ಕೆಐ ಸಾಯಿರಾಂ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.