Latestಬೆಂಗಳೂರು

ಕಾರು ತಗುಲಿದ್ದಕ್ಕೆ ಉದ್ಯಮಿಯ ಮೇಲೆ ಹಲ್ಲೆ, ಪೋರ್ಶೆ ಕಾರು ಸಹಿತ ಮೌಲ್ಯಯುತ ವಸ್ತುಗಳೊಂದಿಗೆ ಮಹಿಳೆ ಪರಾರಿ..!

419

ನ್ಯೂಸ್‌ ನಾಟೌಟ್‌: ಮಹಿಳೆಯೊಬ್ಬರಿಗೆ ಕಾರು ತಗುಲಿದ ವಿಚಾರಕ್ಕೆ ಆಕೆಯ ಸಹಚರರು ಉದ್ಯಮಿಯ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೌಲ್ಯಯುತ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗಿದಲ್ಲದೆ, ಕಾರನ್ನು ವಾಪಸ್‌ ಕೊಡಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಸೇಂಟ್‌ ಮಾಕ್ಸ್ ರಸ್ತೆಯ ಪಾಪಣ್ಣ ಸ್ಟ್ರೀಟ್‌ನ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ವಿನಯ್‌ ಗೌಡ ಎಂಬುವರು ನೀಡಿದ ದೂರಿನ ಮೇರೆಗೆ ದೀಪ್ತಿ ಕಾಟರಗಡ ಹಾಗೂ ಇತರರ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಉದ್ಯಮಿ ವಿನಯ್‌ ಗೌಡ ಮೇ 3ರಂದು ಮುಂಜಾನೆ ಸುಮಾರು 4.15ಕ್ಕೆ ಲ್ಯಾವೆನ್ಯೂ ರಸ್ತೆಯ ಪೂರ್ವ ಗ್ರ್ಯಾಂಡೆ ಅಪಾರ್ಟ್‌ಮೆಂಟ್‌ನ ಬೇಸ್‌ ಮೆಂಟ್‌ನಿಂದ ತಮ್ಮ ಪೋರ್ಶೆ ಕಾರನ್ನು ಹೊರಗೆ ತೆಗೆದಿದ್ದಾರೆ. ಈ ವೇಳೆ ಅಪಾರ್ಟ್‌ಮೆಂಟ್‌ನ ಮುಂದೆ ನಿಂತಿದ್ದ ದೀಪ್ತಿ ಕಾಟರಗಡ ಅವರ ಕಾರಿಗೆ ಅಚಾನಾಕ್ಕಾಗಿ ಕಾರು ತಗುಲಿದೆ. ಅಷ್ಟಕ್ಕೆ ದೀಪ್ತಿ ಕಾಟರಗಡ ಹಾಗೂ ಅವರ ಸಹಚರರು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ನನ್ನ 56.41 ಲಕ್ಷ ರೂ. ಮೌಲ್ಯದ ಕಾರು, ಕಾರಿನಲ್ಲಿದ್ದ 1.25 ಲಕ್ಷ ರೂ. ನಗದು, 85 ಸಾವಿರ ರೂ. ಮೌಲ್ಯದ ಗಾಗಲ್‌ ಹಾಗೂ ಸುಮಾರು 1.50 ಲಕ್ಷ ರೂ. ಮೌಲ್ಯದ ಪರ್ಸ್‌ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ನನ್ನ ಮೊಬೈಲ್‌ ನಾಪತ್ತೆಯಾಗಿತ್ತು. ಆದರೆ, ಅದೇ ದಿನ ರಾತ್ರಿ ದೀಪ್ತಿ ಕಾಟರಗಡ ಅಪಾರ್ಟ್‌ಮೆಂಟ್‌ ನ ಸೆಕ್ಯುರಿಟಿ ಗಾರ್ಡ್‌ಗೆ ಮೊಬೈಲ್‌ ಕೊಟ್ಟು ಹೋಗಿದ್ದಾರೆ ಎಂಬುದು ಗೊತ್ತಾಗಿದೆ.

ಬಳಿಕ ಆಕೆಯನ್ನು ಸಂಪರ್ಕಿಸಿ ಕಾರನ್ನು ವಾಪಸ್‌ ಕೊಡುವಂತೆ ಕೇಳಿದಾಗ, ನೀನು ನನ್ನ ಕಾರನ್ನು ಡ್ಯಾಮೇಜ್‌ ಮಾಡಿದ್ದೀಯಾ. 20 ಲಕ್ಷ ರೂ. ಕೊಡಬೇಕು. ಆ ಬಳಿಕ ಕಾರು ವಾಪಸ್‌ ಕೊಡುವೆ ಎಂದು ಬೇಡಿಕೆ ಇರಿಸಿದ್ದಾರೆ. ಹೀಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕಾರು, ನಗದು ತೆಗೆದುಕೊಂಡು ಪರಾರಿಯಾಗಿರುವ ದೀಪ್ತಿ ಕಾಟರಗಡ ಹಾಗೂ ಅವರ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಯ್‌ ಗೌಡ ದೂರಿನಲ್ಲಿ ಕೋರಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

See also  ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ಯತ್ನ; ನಾಲ್ವರ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget