ಕ್ರೈಂ

ಬಿಎಸ್ ವೈ ಸುತ್ತ ಐಟಿ ಬಲೆ: ವಿಜಯೇಂದ್ರ ಆಪ್ತನ ಮನೆಯಿಂದ ದಾಖಲೆ ವಶ

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯೂ ಆಗಿರುವ ಆಯನೂರು ಉಮೇಶ್, 31 ಗುತ್ತಿಗೆದಾರರು ಹಾಗೂ ಐವರು ಲೆಕ್ಕ ಪರಿಶೋಧಕರ ಕಚೇರಿ, ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಶೋಧ ನಡೆಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳ ಬೃಹತ್ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತೆರಿಗೆ ವಂಚನೆ, ಅಕ್ರಮ ಹಣದ ವಹಿವಾಟು ನಡೆಸಿರುವ ಆರೋಪದ ಮೇಲೆ ಐ.ಟಿ ಇಲಾಖೆ ತನಿಖೆ ಆರಂಭಿಸಿದೆ. ಗುರುವಾರ ನಸುಕಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಐ.ಟಿ ಇಲಾಖೆಯ ಬೆಂಗಳೂರು ಮತ್ತು ಗೋವಾ ಇಲಾಖೆಯ ಅಧಿಕಾರಿಗಳು, ತಡರಾತ್ರಿಯವರೆಗೂ ಶೋಧ ಮುಂದುವರಿಸಿದ್ದರು.

ಬೆಂಗಳೂರು ನಗರ, ಬೀದರ್, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಐ.ಟಿ. ಅಧಿಕಾರಿಗಳಿಂದ ಶೋಧ ನಡೆದಿದೆ. ದಾಳಿಗೊಳಗಾಗಿರುವ ಗುತ್ತಿಗೆದಾರರ ಪೈಕಿ ಹಲವರು ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಮತ್ತು ಕೆಲವು ಸಚಿವರಿಗೆ ನಿಕಟವರ್ತಿಗಳು. ಉಮೇಶ್, ಅರವಿಂದ್, ಪ್ರಸನ್ನ ಸೇರಿದಂತೆ ಯಡಿಯೂರಪ್ಪ ಕುಟುಂಬದ ಜತೆ ನಿಕಟವಾಗಿದ್ದ ಹಲವರ ಮನೆ, ಕಚೇರಿಗಳಲ್ಲಿ ಶೋಧ ನಡೆದಿದೆ. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ರೂ. 25 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ವಹಿವಾಟುಗಳ ಪರಿಶೀಲನೆಗಾಗಿ ಈ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೃಹತ್ ಕಾಲುವೆಗಳು, ಸೇತುವೆಗಳು, ರಸ್ತೆಗಳ ಕಾಮಗಾರಿಗಳು ಮತ್ತು ಒಂದು ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಗಳನ್ನೇ ಕೇಂದ್ರೀಕರಿಸಿ ಶೋಧ ನಡೆಸಲಾಗಿದೆ. ದಾಳಿಗೊಳಗಾದ ಗುತ್ತಿಗೆದಾರರ ಪೈಕಿ ಕೆಲವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಿಗೆ ನಿಕಟವರ್ತಿಗಳಾಗಿದ್ದಾರೆ. ಉಮೇಶ್ ಈ ಕಾಮಗಾರಿಗಳ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಮತ್ತು ಅವರ ನಿಕಟವರ್ತಿಗಳಿಗೆ ನೆರವಾಗಿರುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Related posts

ಚಾಮುಂಡೇಶ್ವರಿ ದಸರಾದ ನಡುವೆ ಮಹಿಷ ದಸರಾದ ಗಲಾಟೆ..! ರಾಕ್ಷಸರು ರಾಕ್ಷಸರನ್ನೇ ಪೂಜಿಸ್ತಾರೆ ಎಂದ ಕಲ್ಲಡ್ಕ ಪ್ರಭಾಕರ್ ಭಟ್..!

ಗೋಕರ್ಣಕ್ಕೆ ಹೊರಟಿದ್ದ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿ..! ಮೂವರು ಸ್ಥಳದಲ್ಲೇ ಸಾವು, 38 ಮಂದಿ ಆಸ್ಪತ್ರೆಗೆ ದಾಖಲು

ಕೋರ್ಟ್ ನಿಂದ ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌..! ವಿಚಾರಣೆಗೆ ಮನೆಗೆ ತೆರಳಿದ್ದ ಎಸ್.ಐ.ಟಿ ಅಧಿಕಾರಿಗಳನ್ನು 7 ಗಂಟೆಗೂ ಹೆಚ್ಚು ಕಾಯಿಸಿದ್ದ ಭವಾನಿ..!