ನ್ಯೂಸ್ ನಾಟೌಟ್: ಇಡೀ ದೇಶವನ್ನೇ ನಡುಗಿಸುವಂತೆ ಮಾಡಿದ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಮೀರತ್ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಹತ್ಯೆ ಇತ್ತೀಚೆಗೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸೌರಭ್, ತನ್ನ 6 ವರ್ಷದ ಮಗಳ ಹುಟ್ಟುಹಬ್ಬ ಆಚರಣೆಗೆಂದು ಭಾರತಕ್ಕೆ ಬಂದಿದ್ದು, ಈ ವೇಳೆ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ಸೌರಭ್ನನ್ನು ಬರ್ಬರವಾಗಿ ಹತ್ಯೆ ಮಾಡಿದರು. ಕೊನೆಗೆ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ನಿಂದ ಮುಚ್ಚಿದರು. ಈ ಘಟನೆಯ ನಂತರ, ಇಬ್ಬರು ಆರೋಪಿಗಳು ಕೆಲವು ದಿನಗಳ ಕಾಲ ಮೋಜು ಮಸ್ತಿ ಸಹ ಮಾಡಿದರು. ಅಂತಿಮವಾಗಿ ಕೊನೆಗೂ ಅವರಿಬ್ಬರನ್ನು ಬಂಧಿಸಲಾಗಿದೆ.
ಆದರೆ ಈ ಕೊಲೆ, ಡ್ರಮ್ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಹೌದು, ಮೀರತ್ ಕೊಲೆ “ನೀಲಿ ಬಣ್ಣದ ಡ್ರಮ್” ಗೆ ಸಂಬಂಧಿಸಿರುವುದರಿಂದ, ಜನರು ಅವುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯು ಅಲಿಘಡದಲ್ಲಿ ಹಾರ್ಡ್‌ವೇರ್ ವಸ್ತುವಾದ ನೀಲಿ ಡ್ರಮ್ ಮಾರಾಟದ ಮೇಲೆ ಪರಿಣಾಮ ಬೀರಿದೆ.ಈ ಕೊಲೆ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಮಾಧ್ಯಮಗಳು ಈ ನೀಲಿ ಡ್ರಮ್ ಅನ್ನು ಪದೇ ಪದೇ ತೋರಿಸಿವೆ. ಇದು ಜನರಲ್ಲಿ ತೀವ್ರ ಭಯ ಹುಟ್ಟಿಸಿದೆ ಎಂದು ಹೇಳಲಾಗಿದೆ. ಕೆಲವರು ಈ ಡ್ರಮ್ ನ್ನೇ ವಿಷಯವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿಯೂ ರೀಲ್ ಗಳನ್ನು ಮಾಡಿದ್ದಾರೆ. ಒಟ್ಟಾರೆ ನೀಲಿ ಡ್ರಮ್ ಕಂಡುಬಂದರೆ, ನೀವು ಮೀರತ್ ರೀತಿಯ ಕೊಲೆಯನ್ನು ಪ್ಲಾನ್ ಮಾಡುತ್ತಿದ್ದೀರಾ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. ನೀಲಿ ಡ್ರಮ್ ಸಖತ್ ಸದ್ದು ಮಾಡಿರುವುದರಿಂದ ಅದರ ವ್ಯವಹಾರದ ಮೇಲೂ ಇದೀಗ ತೀವ್ರ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಇನ್ನು ಅಲಿಘಡದಲ್ಲಿ ಡ್ರಮ್ ಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಯಾರಾದರೂ ನೀಲಿ ಡ್ರಮ್ ಖರೀದಿಸಲು ಬಯಸಿದರೆ, ಅವರಿಗೆ ಅದು ಏಕೆ ಬೇಕು ಎಂದು ನಾವು ಈಗ ಕೇಳುತ್ತೇವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಅಲ್ಲದೇ, ನಾವು ಗುರುತಿನ ಚೀಟಿಯನ್ನೂ ಕೇಳುತ್ತೇವೆ. ಇಡೀ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಜನರು ಈಗ ನೀಲಿ ಡ್ರಮ್‌ಗಳನ್ನು ಖರೀದಿಸಲು ಹೆದರುತ್ತಿದ್ದಾರೆ ಎಂದು ಹೇಳಿದ್ದಾರೆ.