ನ್ಯೂಸ್ ನಾಟೌಟ್: ಪ್ರಿಯಕರನ ಬ್ಲ್ಯಾಕ್ ಮೇಲ್ ನಿಂದ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಸೈರಾಬಾನು ನದಾಫ್(29) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿ. ಮದುವೆಗೆ ಇನ್ನೂ ಕೇವಲ 8 ದಿನ ಬಾಕಿ ಇರುವಾಗಲೇ ಸೈರಾಬಾನು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಭಾನುವಾರ(ಎ.20) ಸೈರಾಬಾನು ಪೋಷಕರು ಮದುವೆ ಸಾಮಗ್ರಿಗಳನ್ನು ತರಲು ಪೇಟೆಗೆ ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 5 ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪೋಷಕರ ಒತ್ತಾಯದ ಮೇರೆಗೆ ಸೈರಾಬಾನು ಬೇರೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಸೈರಾಬಾನು ಮದುವೆ ತಯಾರಿ ನೋಡಿ ಲವರ್ ಮೈಲಾರಿ ಟಾರ್ಚರ್ ಶುರುವಾಗಿತ್ತು. ಬೇರೆ ಮದುವೆ ಆದರೆ ಇಬ್ಬರ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಆತ ಬೆದರಿಕೆ ಹಾಕ್ತಿದ್ದ ಎಂಬ ಆರೋಪವಿದೆ. ಸೈರಾಬಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಶಂಕ ವ್ಯಕ್ತವಾಗಿದೆ.
ಕೊನೆಯ ಮಗಳು ಎಂದು ಹೆತ್ತವರು ಭರ್ಜರಿಯಾಗಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದರು.
ಸೈರಾಬಾನು, ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು ಆಗಿ ಸಾಕಷ್ಟು ಹೆಸರು ಮಾಡಿದ್ದ ಇವರು ಹತ್ತಾರು ಮೆಡಲ್, ಕಪ್ ಗೆದ್ದುಕೊಂಡಿದ್ದರು. ಗಂಡು ಮಕ್ಕಳಿಲ್ಲದ ಕಾರಣ ಸೈರಾಬಾನು ಇಡೀ ಮನೆ ಜವಾಬ್ದಾರಿಯನ್ನು ಹೊತ್ತಿದ್ದರು.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಟಾರ್ಚರ್ ನೀಡಿರುವ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೃಷ್ಣದೇವರಾಯ ಸಮಾಧಿ ಮೇಲೆ ಮಾಂಸ ಮಾರಾಟ..! ಶಾಸಕರಿಂದ ಆಕ್ರೋಶ, ವಿಡಿಯೋ ವೈರಲ್..!