ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಯಾದ ಬೆನ್ನಲ್ಲೇ ಬೆಳ್ಳಾರೆ ಬೆಂಕಿಯುಂಡೆಯಂತಾಗಿದೆ. ಬಿಜೆಪಿ ಸರಕಾರ ಆಡಳಿತದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಹತ್ಯೆ ನಿಲ್ಲಿಸುವುದಕ್ಕೆ ವಿಫಲವಾಗಿದೆ. ನಮ್ಮ ನಾಯಕರು ನಾಲಾಯಕ್ ಗಳಾಗಿದ್ದಾರೆ ಎಂದು ಹೇಳಿ ಹಲವು ಕಡೆ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಾಯಕರು ಇಂದೆಂದೂ ಕಾಣದ ರೀತಿಯ ದೊಡ್ಡ ಹೊಡೆತ ಅನುಭವಿಸಿದ ಬೆನ್ನಲ್ಲೇ ತಡರಾತ್ರಿ ೧೨.೩೦ಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಆರ್ ಟಿ ನಗರದ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದರು. ಇದು ಸಹಜವಾಗಿಯೇ ಇದು ಕುತೂಹಲ ಕೆರಳಿಸಿತ್ತು.
ಪ್ರವೀಣ್ ಹತ್ಯೆ ಸುದ್ದಿ ಬಂದ ಮೇಲೆ ಬಹಳಷ್ಟು ನೋವು ಅನುಭವಿಸಿದ್ದೇನೆ. ಅದಾಗ್ಯೂ ಪೊಲೀಸ್ ಅಧಿಕಾರಿಗಳಿಗೆ ಮೊನ್ನೆ ತಡರಾತ್ರಿ ಸೂಚನೆ ನೀಡಿದ್ದೆ. ಅಮಾಯಕ ಯುವಕನ್ನು ಸಂಚು ಮಾಡಿ ಕೊಂದಿದ್ದಾರೆ. ಇದು ಖಂಡನೀಯ, ಮಾತುಗಳಲ್ಲಿ ಹೇಳುವುದಕ್ಕಿಂತ ಆಕ್ರೋಶ ಮನದಾಳದಲ್ಲಿದೆ. ಹರ್ಷನ ಕೊಲೆ ನಡೆದ ಕೆಲವೇ ತಿಂಗಳಲ್ಲಿ ಮತ್ತೊಂದು ಕೊಲೆ ಆಗಿರುವುದು ಘಾಸಿಯಾಗಿದೆ. ಪಕ್ಷದ ಕಾರ್ಯಕರ್ತನ ಕೊಲೆಯಾದಾಗ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಿಗೆ ಹೋಗಿದ್ದಾರೆ. ಅದು ನಿಜಕ್ಕೂ ಶ್ಲಾಘನೀಯ ಕೆಲಸ. ನಾಳೆ ನಮ್ಮ ಸರಕಾರಕ್ಕೆ ೧ ವರ್ಷ ಪೂರೈಸುತ್ತಿದೆ. ಹಲವಾರು ಒಳ್ಳೆಯ ಕೆಲಸ ಮಾಡಬೇಕೆಂದಿದ್ದೇನೆ. ಪ್ರವೀಣ್ ಮನೆಯವರ ಹಾಗೂ ಅವರ ತಾಯಿಯ ಆಕ್ರಂದನ ನೋಡಿ ಮಮ್ಮುಲ ಮರುಗಿದ್ದೇನೆ. ಈ ಕಾರಣದಿಂದ ನಾಳೆ ದೊಡ್ಡ ಬಳ್ಳಾಪುರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದೆ. ವಿಧಾನಸೌಧದಲ್ಲಿ ನಡೆಯಬೇಕಿದ್ದ ಸರಕಾರದ ಕಾರ್ಯಕ್ರಮ ಕೂಡ ರದ್ದಾಗಿದೆ ಎಂದು ತಿಳಿಸಿದರು.
ಮನಃಸಾಕ್ಷಿಗೆ ಅನುಗುಣವಾಗಿ ನಾಳೆಯ ಕಾರ್ಯಕ್ರಮ ರದ್ದು ಮಾಡಿದ್ದೇನೆ. ಒಂದಂತೂ ನಿಜ ನಮ್ಮ ರಾಜ್ಯದಲ್ಲಿ ಕೋಮು ಸೌಹಾರ್ಧ ಕದಡುವ ಯತ್ನ ನಡೆಯುತ್ತಿದೆ. ಇದು ರಾಜ್ಯದಲ್ಲಿ ಮಾತ್ರವಲ್ಲ. ಎಲ್ಲ ರಾಜ್ಯಗಳಲ್ಲೂ ಆಗಿದೆ. ಕಾಂಗ್ರೆಸ್ ಸರಕಾರ ಇದ್ದಾಗಲೂ ಹಿಂದೂ ಯುವಕರ ಹತ್ಯೆಯಾಗಿದೆ. ಆದರೆ ಈ ಸಲ ದೃಢವಾದ ಸಂಕಲ್ಪ ಮಾಡಿದ್ದೇವೆ. ಮಾಮೂಲಿಗಿಂತ ಕಠಿಣ ಕ್ರಮಗಳನ್ನು, ವಿಶೇಷ ಕಾನೂನುಗಳನ್ನು ತರುತ್ತೇವೆ. ಅಮಾಯಕರನ್ನು ಕೊಲ್ಲುವ ಯಾವುದೇ ಸಂಘಟನೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆ. ಇದಕ್ಕಾಗಿ ಸಂಪೂರ್ಣವಾಗಿ ಕಮಾಂಡೋ ಫೋರ್ಸ್ ಅನ್ನು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ನೀಡುತ್ತೇವೆ. ವಿಶೇಷ ಎಟಿಎಸ್ ರಷನೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನನಗೆ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ನಾಗರಿಕನ ಜೀವ ಮಹತ್ವದ್ದು. ಕೊಲೆಗಡುಕ ದುಷ್ಟ ಶಕ್ತಿಗಳ ಪಾಪದ ಕೊಡ ತುಂಬಿದೆ ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಯುವಜನರ ಆಕ್ರೋಶ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಅದಕ್ಕೆ ತಕ್ಕದಾಗಿ ನಡೆದುಕೊಳ್ಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.