ನ್ಯೂಸ್ ನಾಟೌಟ್: ಅಪರಿಚಿತರ ತಂಡವೊಂದು ವಿಷಪೂರಿತ ಇಂಜೆಕ್ಷನ್ ಚುಚ್ಚಿ ಬಿಜೆಪಿ ನಾಯಕನನ್ನು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಸೋಮವಾರ (ಮಾ.10) ನಡೆದಿದೆ.
ದಫ್ತಾರಾ ಗ್ರಾಮದ ಗುಲ್ಫಾಮ್ ಸಿಂಗ್ ಯಾದವ್ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ದೀಪಕ್ ತಿವಾರಿ ‘ಜುನವಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ದಫ್ತಾರಾ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗುಲ್ಫಾಮ್ ಸಿಂಗ್ ಯಾದವ್ ಬಳಿ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರು ಮಾತನಾಡುವ ಉದ್ದೇಶದಿಂದ ಬಂದು ನೀರು ಕೇಳಿದ್ದಾರೆ. ನೀರು ಕುಡಿದ ಕೆಲವೇ ಹೊತ್ತಿನಲ್ಲಿ ಮೂವರಲ್ಲಿ ಓರ್ವ ತನ್ನ ಕೈಯಲ್ಲಿದ್ದ ವಿಷಪೂರಿತ ಚುಚ್ಚು ಮದ್ದನ್ನು ಯಾದವ್ ಹೊಟ್ಟೆಗೆ ಚುಚ್ಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದಾದ ಕೆಲ ಹೊತ್ತಿನಲ್ಲೇ ಅಸ್ವಸ್ಥಗೊಂಡು ಚುಚ್ಚು ಮದ್ದಿನ ನೋವು ತಾಳಲಾರದೆ ಯಾದವ್ ಕಿರುಚಲು ಶುರು ಮಾಡಿದ್ದು, ವಿಚಾರ ಗೊತ್ತಾಗುತ್ತಿದ್ದಂತೆ ಕುಟುಂಬದ ಸದಸ್ಯರು ಅಕ್ಕಪಕ್ಕದವರು ಸೇರಿ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿಂದ ಅಲಿಗಢ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಈ ವೇಳೆ ಮಾರ್ಗ ಮಧ್ಯೆ ಯಾದವ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಗುನ್ನೌರ್ ವಿಧಾನಸಭಾ ಕ್ಷೇತ್ರದಿಂದ 2004 ರ ಉಪಚುನಾವಣೆಯಲ್ಲಿ, ಯಾದವ್ ಭಾರತೀಯ ಜನತಾ ಪಕ್ಷದ ನಾಯಕನಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸ್ಪರ್ಧಿಸಿದರು.
ಇದನ್ನೂ ಓದಿ:491 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.