ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬ ಬೈಕ್ ಎಗರಿಸಿ, ನಂತರ 1500 ರೂ. ಹಣ ಮತ್ತು ಪತ್ರದೊಂದಿಗೆ ಆ ಬೈಕನ್ನು ಮಾಲೀಕನಿಗೆ ವಾಪಸ್ ಕೊಟ್ಟಿದ್ದಾನೆ.
ಈ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ತಿರುಪ್ಪುವನಂ ಪ್ರದೇಶದ ಬಳಿ ಇರುವ ಡಿ.ಪಳಯೂರು ಎಂಬ ಹಳ್ಳಿಯ ವೀರಮಣಿ ಎಂಬವರ ಬೈಕನ್ನು ಎಗರಿಸಿದ ವ್ಯಕ್ತಿಯೊಬ್ಬ ಆ ಬೈಕನ್ನು ಪತ್ರ ಮತ್ತು 1500 ರೂ. ಪೆಟ್ರೋಲ್ ಹಣದ ಜೊತೆಗೆ ವಾಪಸ್ ನೀಡಿದ್ದಾನೆ.
ವೀರಮಣಿ ಎಂದಿನಂತೆ ರಾತ್ರಿ ತನ್ನ ಮನೆಯ ಮುಂದೆ ಬೈಕ್ ನಿಲ್ಲಿಸಿ ನಂತರ ಒಳಗೆ ಹೋಗಿ ಮಲಗಿದ್ದ. ಆದರೆ ಮರುದಿನ ಬೆಳಗ್ಗೆ ಎದ್ದಾಗ ಬೈಕ್ ಕಳ್ಳತನವಾಗಿತ್ತು. ಇದರಿಂದ ಆಘಾತಕ್ಕೊಳಗಾದ ವೀರಮಣಿ ಮತ್ತು ಆತನ ಕುಟುಂಬ ಸದಸ್ಯರು ಬೈಕ್ ಗಾಗಿ ಎಲ್ಲೆಡೆ ಹುಡುಕಿದರು. ಆದರೆ ವಾಹನ ಎಲ್ಲೂ ಪತ್ತೆಯಾಗಲಿಲ್ಲ.
ಯಾರೋ ಬೈಕ್ ಕದ್ದಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ವೀರಮಣಿ ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಬೈಕ್ ಗಾಗಿ ಹುಡುಕಾಟ ನಡೆಸಿದರು. ಆದ್ರೆ ಪೊಲೀಸರಿಗೂ ಬೈಕ್ ಸಿಕ್ಕಿರಲಿಲ್ಲ. ಈಗ ಕಳ್ಳನೇ ಪತ್ರ ಮತ್ತು ಪೆಟ್ರೋಲ್ ಖರ್ಚಿನ ಕಣದೊಂದಿಗೆ ವಾಪಾಸ್ ನೀಡಿದ್ದಾನೆ.