ಕರಾವಳಿಪುತ್ತೂರುರಾಜಕೀಯ

ಪುತ್ತೂರು: ಅರುಣ್‌ ಪುತ್ತಿಲ ವಿರುದ್ಧ ಬೆಟ್ಟಿಂಗ್‌ ಕಟ್ಟಿ ಕೋಟ್ಯಂತರ ರೂಪಾಯಿ ಕಳೆದುಕೊಂಡ ಬಿಜೆಪಿ ಫ್ಯಾನ್ಸ್‌…!

ನ್ಯೂಸ್‌ ನಾಟೌಟ್‌: ರಾಜ್ಯ ವಿಧಾನ ಸಭೆ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಆದರೆ ಪುತ್ತೂರಿನಲ್ಲಿ ಮಾತ್ರ ಫಲಿತಾಂಶ ಲೆಕ್ಕಾಚಾರದ ಕಾವು ಇನ್ನೂ ಆರಿಲ್ಲ. ಇದಕ್ಕೆ ಕಾರಣ ಚುನಾವಣೆ ಹೆಸರಲ್ಲಿ ನಡೆದ ಭಾರೀ ಮೊತ್ತದ ಬೆಟ್ಟಿಂಗ್‌.

ಈ ಬಾರಿ ಪುತ್ತೂರಿನಿಂದ ಬಿಜೆಪಿಯಿಂದ ಸೀಟ್‌ ಸಿಗದೆ ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ವಿರುದ್ಧ ಬಿಜೆಪಿ ಪರವಾಗಿ ಬೆಟ್ಟಿಂಗ್‌ನಲ್ಲಿ ಹಣ ಕಟ್ಟಿದ್ದ ಕೆಲವರು ಕೋಟ್ಯಂತರ ರೂಪಾಯಿ ಕಳೆದುಕೊಂಡು ಚಿಂತೆಗೀಡು ಮಾಡುವಂತಾಗಿದೆ.

ಸ್ಥಳೀಯರ ಪ್ರಕಾರ, ಬಿಜೆಪಿ 3ನೇ ಸ್ಥಾನಕ್ಕೆ ಹೋಗಲಿದೆ ಎಂದು ಅರುಣ್‌ ಪುತ್ತಿಲ ಪರ ಇದ್ದವರು ಬೆಟ್ಟಿಂಗ್‌ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ 3ನೇ ಸ್ಥಾನಕ್ಕೆ ಹೋಗಲ್ಲ ಎಂದು ಬಿಜೆಪಿ ಅಭ್ಯರ್ಥಿ ಪರ ನಿಷ್ಠೆ ಇದ್ದವರು ಬೆಟ್ಟಿಂಗ್ ಕಟ್ಟಿದ್ದಾರೆ. ಡಿಸಿಸಿ ಬ್ಯಾಂಕಿನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಏಳು ಕೋಟಿ ರೂ. ಬೆಟ್ ಕಟ್ಟಿದ್ದು, ಹಣ ಕಳಕೊಂಡಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಇನ್ನೊಬ್ಬರು ತಾಲೂಕು ಬಿಜೆಪಿ ಪದಾಧಿಕಾರಿಯೊಬ್ಬರು ಬಂಗಾರ ಅಡವಿಟ್ಟು 50 ಲಕ್ಷ ರೂಪಾಯಿ ಸುರಿದಿದ್ದು, ಅದನ್ನು ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಪೆಟ್ರೋಲ್ ಪಂಪ್ ಮಾಡಲು ತೆಗೆದಿಟ್ಟಿದ್ದ 2.5 ಕೋಟಿ ರೂ. ಹಣವನ್ನು ಬೆಟ್ಟಿಂಗ್‌ ಕಟ್ಟಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಗೆ ಎರಡು ದಿನ ಇರುವಾಗಲೇ ಬೆಟ್ಟಿಂಗ್ ನಡೆದಿತ್ತು. ಮತ ಎಣಿಕೆ ನಡೆಯುವ ಮುನ್ನಾ ದಿನ ಈ ಬೆಟ್ಟಿಂಗ್ ಭರಾಟೆ ಜೋರಾಗಿತ್ತು. ಬಿಜೆಪಿಯವರು ಅತಿ ಆತ್ಮವಿಶ್ವಾಸದಿಂದ ಅರುಣ್ ಪುತ್ತಿಲ ಪರವಾಗಿ 15 ಸಾವಿರಕ್ಕಿಂತ ಹೆಚ್ಚು ಮತ ಬೀಳಲ್ಲ ಎಂದು ಬೆಟ್ ಕಟ್ಟಿದ್ದರು. ಆದರೆ ಪುತ್ತಿಲ ಪರ ಇದ್ದವರು ಕಡಿಮೆ ರೇಟಲ್ಲಿ ಜೂಜಿನ ಸವಾಲು ಪಡೆದು ದೊಡ್ಡ ಮೊತ್ತದ ಹಣ ಪಡೆದಿದ್ದಾರೆ. ಪುತ್ತೂರಿನ ಕೆಲವು ಸಾಮಾನ್ಯ ಅಂಗಡಿ ವ್ಯಾಪಾರಸ್ಥರು, ತೆಂಗಿನಕಾಯಿ ವ್ಯಾಪಾರಿಗಳು ಈ ಬೆಟ್ಟಿಂಗಲ್ಲಿ ಭರ್ಜರಿ ಹಣ ಮಾಡಿದ್ದಾರೆ. ಒಟ್ಟಿನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಬೆಟ್ಟಿಂಗ್‌ ವೀರರು ಹಣಕಟ್ಟಿ ಈಗ ಎಲ್ಲವನ್ನೂ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ಜನಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ.

Related posts

ಫ್ರೀ ಬಸ್ ಪ್ರಯಾಣ ಬೆನ್ನಲ್ಲೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಜನವೋ ಜನ..! ಬಸ್‌ಗಳಲ್ಲಿ ಕಾಲಿಡಕ್ಕೂ ಜಾಗವಿಲ್ಲದಷ್ಟು ಮಹಿಳಾ ಪ್ರಯಾಣಿಕರು..!

ಭಿಕ್ಷೆ ಬೇಡಿ ಅನ್ನದಾನಕ್ಕೆ 9 ಲಕ್ಷ ರು. ನೀಡಿದ ಅಜ್ಜಿ..!

ತಲ್ವಾರ್ ದಾಳಿ ನಡೆದಿಲ್ಲ: ಸುಳ್ಳು ಸುದ್ದಿ ಹಬ್ಬಿಸಿದ ಯುವಕ