ನ್ಯೂಸ್ ನಾಟೌಟ್: ರೌಡಿ ಶೀಟರ್ ಎಂಬ ಹಣೆಪಟ್ಟಿ ಹೊತ್ತು ತಿರುಗುತ್ತಿದ್ದ ಬೆಂಗಳೂರಿನ ನಟೋರಿಯಸ್ ರೌಡಿಶೀಟರ್ ನಿಗೂಢ ಹತ್ಯೆಯಾಗಿದ್ದು, ಬಾನುವಾರ ಪ್ರಕರಣ ಬೆಳಕಿಗೆ ಬಂದಿದ್ದು, ತಮಿಳುನಾಡಿನ ಕೃಷ್ಣಗಿರಿ ಬಳಿ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರದ ಪೊಲೀಸ್ ಠಾಣೆ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಆಗಿದ್ದ ಅಲ್ಯೂಮಿನಿಯಂ ಬಾಬುನನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಹತ್ಯೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ದುಷ್ಕರ್ಮಿಗಳ ಕೊಚ್ಚಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಬಾಬು ಸ್ವಲ್ಪದಿನಗಳ ಹಿಂದಷ್ಟೇ ನೆರೆ ರಾಜ್ಯ ತಮಿಳುನಾಡಿಗೆ ವಾಸ್ತವ್ಯ ಬದಲಿಸಿಕೊಂಡಿದ್ದ ಎನ್ನಲಾಗಿದೆ. ಕೊತ್ತನೂರಿನ ದಿಣ್ಣೆ ಬಳಿಕ ವ್ಯವಹಾರವೊಂದನ್ನು ನಡೆಸುತ್ತಿದ್ದ ಬಾಬುನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.
ಮೊದಲೇ ರೌಡಿ ಶೀಟರ್ ಆಗಿದ್ದ ಬಾಬು ಕೆಲವು ರಾಜಕಾರಣಿಗಳನ್ನು ಎದುರು ಹಾಕಿಕೊಂಡಿದ್ದ. ಅರಸಯ್ಯ ಎಂಬ ರೌಡಿಗಳ ಗ್ಯಾಂಗ್‌ನಲ್ಲಿ ಆತ ಗುರುತಿಸಿಕೊಂಡಿದ್ದ. ಆತನನ್ನು ಇದೀಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ತಮಿಳುನಾಡಿನ ಡೆಂಕಣಕೋಟೆ ಕಾಡಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಬಾಬುನ ಶವ ಪತ್ತೆಯಾಗಿದೆ. ಈ ಕುರಿತು ತಮಿಳುನಾಡಿನ ತಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಮೃತ ರೌಡಿ ಶೀಟರ್ ಅಲ್ಯೂಮಿನಿಯಂ ಬಾಬು ಮೇಲೆ ಕೊಲೆ, ಸುಲಿಗೆ, ಬೆದರಿಕೆ, ದರೋಡೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಕೈವಾಡ ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.