ನ್ಯೂಸ್ ನಾಟೌಟ್: ಒಂದು ಶಾಲೆಯ ಸಂಭ್ರಮ ಹೆಚ್ಚಾಗಬೇಕಾದರೆ ಅಲ್ಲಿ ನೂರಾರು ವಿದ್ಯಾರ್ಥಿಗಳಿರಬೇಕು. ಮಕ್ಕಳ ಚಟುವಟಿಕೆ ಎದ್ದು ಕಾಣಬೇಕು..ಶಿಕ್ಷಕ ಶಿಕ್ಷಕಿಯರ ಸಂಖ್ಯೆ ಹೆಚ್ಚಿದ್ದು ಪ್ರತಿ ಕ್ಲಾಸ್ ರೂಂಗಳಿಗೂ ಹೆಜ್ಜೆಯಿಟ್ಟು ಮಕ್ಕಳ ಅಭಿವೃದ್ಧಿ ಹಾಗೂ ಚಲನವಲನ ಗಮನಿಸುತ್ತಿರಬೇಕು..ಆದರೆ ಇಲ್ಲೊಂದು ಶಾಲೆಯಿದೆ ವಿದ್ಯಾರ್ಥಿಗಳಿರೋದು ಕೇವಲ ಹತ್ತು,ಇಬ್ಬರು ಶಿಕ್ಷಕಿಯರು ಹೀಗಿದ್ದರೂ ಕೂಡ ಅದ್ದೂರಿಯಾಗಿ ಮಕ್ಕಳ ಪ್ರತಿಭಾ ದಿನ ಹಾಗೂ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸಿದ್ದಾರೆ.
ಹೌದು, ಬೆಳ್ತಂಗಡಿಯ ಫಂಡಿಜೆ ವಾಳ್ಯದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇರುವುದು ಕೇವಲ 10 ಮಕ್ಕಳು ಮಾತ್ರ. ಒಬ್ಬರು ಸರಕಾರಿ ಶಿಕ್ಷಕಿ, ಇನ್ನೊಬ್ಬರು ಅತಿಥಿ ಶಿಕ್ಷಕಿ. ಓರ್ವ ವಿದ್ಯಾರ್ಥಿ ಇದ್ದರೂ ಶಾಲೆ ಬಂದ್ ಮಾಡಬಾರದು ಎಂಬ ಉದ್ದೇಶದಿಂದ ಶಾಲೆ ನಡೆಯುತ್ತಿದೆ.ಆದರೂ ಬರಬರುತ್ತಾ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು. ಸ್ಕೂಲ್ ಡೇ ನಡೆಸುವ ಆಸಕ್ತಿಯೂ ಕಡಿಮೆಯಾಗಿತ್ತು. ಹೀಗಾಗಿ ಬರೋಬ್ಬರಿ 40 ವರ್ಷಗಳಿಂದ ಯಾವುದೇ ವಾರ್ಷಿಕೋತ್ಸವ ನಡೆದಿರಲಿಲ್ಲ.
ಆದರೆ ಈ ಬಾರಿ ಮಾತ್ರ ವಾರ್ಷಿಕೋತ್ಸವ ನಡೆಸಲೇ ಬೇಕೆಂದು ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿ’ಸೋಜಾ, ಶಾಲಾ ಉಸ್ತುವಾರಿ ಸಮಿತಿ ಮತ್ತು ಹಳೇ ವಿದ್ಯಾರ್ಥಿಗಳು ಜತೆಯಾಗಿ ನಿರ್ಧರಿಸಿದ್ದರು. ವಾಟ್ಸಾಪ್ ಗ್ರೂಪ್ ಮೂಲಕ ವಾರ್ಷಿಕೋತ್ಸವದ ಚಟುವಟಿಕೆಗೆ ಚಾಲನೆ ನೀಡುತ್ತಾ ಊರಿನವರು ಆರ್ಥಿಕ ಸಹಾಯದೊಂದಿಗೆ ಶಾಲೆ ಅಲಂಕಾರ, ವೇದಿಕೆ ರಚನೆ, ಊಟದ ವ್ಯವಸ್ಥೆ ಎಲ್ಲವೂ ನೆರವೇರಿತು. ಸುಮಾರು 40 ವರ್ಷಗಳ ಬಳಿಕ ಫೆ.22ರಂದು ಸಂಜೆ ಶಾಲಾ ಮಕ್ಕಳ ಪ್ರತಿಭಾ ದಿನ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.ನೂರಾರು ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನಾಲ್ಕು ದಶಕಗಳ ಕನಸನ್ನು ನನಸಾಗಿಸಿದ್ದು ಸಂತಸದ ವಿಚಾರ.