ಕಡೂರು: ಕುಡಿತ ಮತ್ತಿನಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಹುಡುಗರಿಗೆ ಯದ್ವಾತದ್ವಾ ಟಿಪ್ಸ್ ಕೊಟ್ಟು ಹೋಗುವ ಕರುಣಾಮಯಿ ಕುಡುಕರನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕುಡುಕರ ತಂಡ ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಜೊತೆ ಜಗಳವಾಡಿ ಆತನನ್ನೇ ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಯಶ್ ಪಾಲ್(28) ಮೃತ ದುರ್ದೈವಿ. ಯುಗಾದಿ ಹಬ್ಬದ ದಿನದಂದು ಆರು ಜನ ಯುವಕರು ಸಖರಾಯಪಟ್ಟಣ ಸಮೀಪದ ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿದ್ದರು. ಅಲ್ಲಿಂದ ಬಂದವರು ಮದ್ಯದ ಖರೀದಿಗೆ ಸಖರಾಯಪಟ್ಟಣದ ಬಾರ್ ಗೆ ಬಂದಿದ್ದರು. ಬಿಯರ್ ಖರೀದಿಸಿದ ಬಳಿಕ ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶಿಯರ್ ಲಕ್ಷ್ಮೀಶ್ ಜೊತೆ ಮಾತಿನ ಚಕಮಕಿ ನಡೆದಿದೆ. ಹತ್ತು ರೂಪಾಯಿ ಚಿಲ್ಲರೆ ಹಣಕ್ಕಾಗಿ ಗಲಾಟೆ ಮಾಡಿದ್ದರು ಎಂದು ಹೇಳಲಾಗಿದೆ. ಈ ವೇಳೆ, ಬಾರ್ ಮುಂದೆ ಇದ್ದ ಬೈಕನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಬೈಕ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನು ಕಂಡು ಯಶ್ ಪಾಲ್ ಆಕ್ಷೇಪಿಸಿದ್ದಾರೆ. ಜನ ಓಡಾಡಲು ತೊಂದರೆಯಾಗುತ್ತೆ. ಪೊಲೀಸರು ಬಂದರೆ ಬೈಯುತ್ತಾರೆ, ಗಾಡಿಗಳನ್ನು ತೆಗೆಯಿರಿ ಎಂದಿದ್ದಾನೆ. ಇದರಿಂದ ಕೋಪಗೊಂಡ ಆರು ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಕೆಲಸ ಮುಗಿಸಿ ರಾತ್ರಿ 9ಗಂಟೆ ಸುಮಾರಿಗೆ ಮನೆಗೆ ಹೋದ ಯಶ್ ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಬಳಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.