ನ್ಯೂಸ್ ನಾಟೌಟ್: ಒಂಬತ್ತು ತಿಂಗಳ ಮಗು ಆಟವಾಡುತ್ತ ಬಾಟಲಿ ಮುಚ್ಚಳ ನುಂಗಿ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ ಎಆರ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದರ್ ಕುಟುಂಬ ಮಂಚಿರ್ಯಾಲ ಜಿಲ್ಲೆಯ ಲಕ್ಷೆಟ್ಟಿಪೇಟೆಯ ಕೊಮ್ಮುಗುಡೆಂನಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಪತ್ನಿ, ಒಂಬತ್ತು ತಿಂಗಳ ಮಗು ರುದ್ರ ಅಯಾನ್ ಜೊತೆ ತೆರಳಿದ್ದಾರೆ. ಈ ವೇಳೆ ಸಮಾರಂಭದಲ್ಲಿ ಸುರೇಂದರ್ ಅವರ ಸ್ನೇಹಿತರೂ ಬಂದಿದ್ದರು ಹಾಗೆಯೇ ಅವರ ಜೊತೆ ಮಾತನಾಡುತ್ತಿರುವ ವೇಳೆ ಸುರೇಂದರ್ ಅವರ ಕೈಯಲ್ಲಿದ್ದ ಮಗು ಅಯಾನ್ ಅಲ್ಲೇ ಪಕ್ಕದಲ್ಲಿ ಕುಳಿತು ಆಟವಾಡುತ್ತಿತ್ತು. ಈ ವೇಳೆ ಪಕ್ಕದಲ್ಲಿ ಬಿದ್ದಿದ್ದ ಬಾಟಲಿಯ ಮುಚ್ಚಳ ಮಗುವಿನ ಕೈಗೆ ಸಿಕ್ಕಿದೆ ಮಗು ಆಟವಾಡುತ್ತಾ ಕೈಗೆ ಸಿಕ್ಕ ಬಾಟಲಿ ಮುಚ್ಚಳವನ್ನು ಬಾಯಿಗೆ ಹಾಕಿ ನುಂಗಿದೆ ಆದರೆ ಅದು ಮಗುವಿನ ಹೊಟ್ಟೆಗೆ ಹೋಗದೆ ಗಂಟಲಲ್ಲಿ ಸಿಕ್ಕಿ ಮಗು ಅಸ್ವಸ್ಥಗೊಂಡಿದೆ.
ಮಗು ಅಸ್ವಸ್ಥವಾಗಿರುವುದನ್ನು ಕಂಡ ತಂದೆ ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಮಗುವನ್ನು ಮಂಚಿರ್ಯಾಲದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದ ವೇಳೆ ಮಗುವಿನ ಉಸಿರು ನಿಂತಿರುವುದಾಗಿ ಹೇಳಿದ್ದಾರೆ.