ದೇಶ-ಪ್ರಪಂಚವೈರಲ್ ನ್ಯೂಸ್

ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ರಾಕೆಟ್ ತುಣುಕು..? ಬೃಹದಾಕಾರದ ಈ ನಿಗೂಢ ವಸ್ತುನ ಬಗ್ಗೆ ಪೊಲೀಸರು ಹೇಳಿದ್ದೇನು?

ನ್ಯೂಸ್ ನಾಟೌಟ್: ಬೃಹತ್ ಗಾತ್ರದ ಲೋಹದ ಸಿಲಿಂಡರ್ ಒಂದು ಪಶ್ಚಿಮ ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ರಾಕೆಟ್, ವಿಮಾನ ಅಥವಾ ಹಡಗಿನ ಬಿಡಿ ಭಾಗ ಆಗಿರಬಹುದೇ ಅನ್ನೋದೂ ಗೊತ್ತಾಗುತ್ತಿಲ್ಲ. ಹೀಗಾಗಿ, ಈ ನಿಗೂಢ ಹಾಗೂ ವಿಚಿತ್ರ ವಸ್ತುವಿನಿಂದ ದೂರ ಉಳಿಯುವಂತೆ ಪೊಲೀಸರು ಬೀಚ್‌ಗೆ ಬರುವ ಜನರಿಗೆ ಸೂಚನೆ ನೀಡುತ್ತಿದ್ದಾರೆ. ಈ ವಸ್ತುವಿನ ಸಮೀಪ ಸಾಗಿದ ವೇಳೆ ಅಪಾಯಕಾರಿ ಅನಿಲ ಅಥವಾ ಇನ್ಯಾವುದೇ ಆಪತ್ತು ಎದುರಾಗುವ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ವಸ್ತು ಯಾವುದೇ ವಿಮಾನದ ಬಿಡಿ ಭಾಗದಂತೆ ಕಂಡು ಬರುತ್ತಿಲ್ಲ. ಹೀಗಾಗಿ, ಜನರೂ ಕೂಡಾ ಚಿತ್ರ ವಿಚಿತ್ರ ರೀತಿಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಕೆಲವರು ಈ ವಸ್ತುವನ್ನು ಅನ್ಯ ಗ್ರಹ ಜೀವಿಗಳ ವಾಹನ ಯುಎಫ್‌ಒ ಇರಬಹುದೇ ಎಂದೂ ಊಹಿಸುತ್ತಿದ್ದಾರೆ. ಇನ್ನೂ ಕೆಲವರು ಕೆಲ ವರ್ಷಗಳ ಹಿಂದೆ ಸಮುದ್ರದ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿದ್ದ ಮಲೇಷ್ಯಾದ ವಿಮಾನದ ಬಿಡಿ ಭಾಗ ಇರಬಹುದೇ ಎನ್ನುತ್ತಿದ್ದಾರೆ.
ಈ ಬೃಹತ್ ಗಾತ್ರದ ಲೋಹದ ವಸ್ತುವಿನ ಮೂಲವೇನು ಎಂಬ ಕುರಿತಾಗಿ ತನಿಖೆ ನಡೆಯುತ್ತಿದೆ. ಹೀಗಾಗಿ, ಯಾವುದೇ ನಿರ್ಧಾರಕ್ಕೆ ಈಗಲೇ ಬರಲಾಗದು ಎಂದು ಪಶ್ಚಿಮ ಆಸ್ಟ್ರೇಲಿಯಾ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನರು ಈ ನಿಗೂಢ ವಸ್ತುವಿನ ಬಳಿ ಬಾರದಂತೆ ತಡೆಯಲು ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಆಸ್ಟ್ರೇಲಿಯಾದ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ಈ ಕುರಿತಾಗಿ ವರದಿ ಪ್ರಕಟವಾಗಿದ್ದು, ಈ ವಿಚಿತ್ರ ವಸ್ತುವನ್ನು ನೋಡಲು ಜನರು ತಂಡೋಪತಂಡವಾಗಿ ಬೀಚ್‌ಗೆ ಹರಿದು ಬರುತ್ತಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್‌ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಪೊಲೀಸರು ಸಮುದ್ರದಲ್ಲಿ ಸಿಕ್ಕಿರುವ ವಸ್ತುವಿನ ಮೂಲವೇನು? ಇದು ಅಪಾಯಕಾರಿಯೇ ಎಂಬೆಲ್ಲಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಬಾಹ್ಯಾಕಾಶ ತಜ್ಞರೂ ಕೂಡಾ ಈ ಕುರಿತಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ವಸ್ತು ಏನಿರಬಹುದು? ಯಾವುದಾದ್ರೂ ದೇಶದ ರಾಕೆಟ್‌ನ ಬಿಡಿ ಭಾಗ ಇರಬಹುದೇ? ಸಮುದ್ರಕ್ಕೆ ಬಿದ್ದ ವಸ್ತು ತೇಲಿಕೊಂಡು ಇಲ್ಲಿಯವರೆಗೂ ಬಂದಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕಾಗಿ ವಿಶ್ವಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವರು ಈ ವಸ್ತುವು ಭಾರತದ ಚಂದ್ರಯಾನ 3ರ ಗಗನ ನೌಕೆ ಉಡಾಯಿಸಿದ ರಾಕೆಟ್‌ನ ಬಿಡಿ ಭಾಗ ಇರಬಹುದು ಎಂದೂ ವಿಶ್ಲೇಷಿಸುತ್ತಿದ್ದಾರೆ ಎನ್ನಲಾಗಿದೆ.

Related posts

ಇಂಡಿಗೋ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಕರಾವಳಿಯ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿ!

ಮೊಹಮ್ಮದ್‌ ಸುಹೇಬ್‌ಗೆ ಮಸೀದಿಗಳ ಮೇಲೇಕೆ ಅಷ್ಟೊಂದು ಕೋಪ..? ಈತನಿಂದ ಬರೋಬ್ಬರಿ 10 ಮಸೀದಿಗಳಲ್ಲಿ ಕಳ್ಳತನ!

ಮಡಿಕೇರಿ: ಸಾವಿರಾರು ಮರಗಳ ಮಾರಣ ಹೋಮ..! ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೇ ಸಾಕ್ಷಿ