ನ್ಯೂಸ್ ನಾಟೌಟ್: ಕದನ ವಿರಾಮದ ಬಳಕವೂ ಭಾರತದ ವಿರುದ್ಧ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಹೋರಾಟಗಾರರು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಭಾರತಕ್ಕೆ ಬೆಂಬಲ ಘೋಷಿಸಿದ್ದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಪಾಕಿಸ್ತಾನಿ ಮಿಲಿಟರಿ ಮತ್ತು ಗುಪ್ತಚರ ತಾಣಗಳನ್ನು ಗುರಿಯಾಗಿಸಿಕೊಂಡು 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಬಿಎಲ್‌ಎ ಅಧಿಕೃತವಾಗಿ ಹೇಳಿಕೊಂಡಿದೆ.
ಬಿಎಲ್‌ಎ ವಕ್ತಾರ ಜಿಯಾಂಡ್ ಬಲೋಚ್ ನೀಡಿದ ಮಾಹಿತಿ ಪ್ರಕಾರ, ಈ ವಾರದ ಆರಂಭದಲ್ಲಿ ಭಾರತ-ಪಾಕಿಸ್ತಾನ ಮಿಲಿಟರಿ ಉದ್ವಿಗ್ನತೆ ತೀವ್ರತೆ ಪಡೆದುಕೊಂಡಿತ್ತು. ಇದರ ಸದುಪಯೋಗ ಪಡೆದುಕೊಂಡು ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಲವು ಗಂಟೆಗಳ ಕಾಲ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಈ ದಾಳಿಯಲ್ಲಿ ಪಾಕ್ ಬೆಂಗಾವಲು ವಾಹನ, ಗುಪ್ತಚರ ಕೇಂದ್ರಗಳು ಮತ್ತು ಖನಿಜ ಸಾಗಣೆ ವಾಹನಗಳೂ ಸೇರಿದ್ದವು. ಈ ದಾಳಿಗಳು ಶತ್ರುಗಳನ್ನ ನಿರ್ಮೂಲನೆ ಮಾಡುವುದು ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಬಲವಾದ ಯುದ್ಧಕ್ಕೆ ಸಿದ್ಧತೆ ಬಲಪಡಿಸುವ ನಿಟ್ಟಿನಲ್ಲಿ ಸೇನಾ ಸಿದ್ಧತೆಯೂ ಕೂಡ ಆಗಿದೆ ಎಂದು ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ಬೆಂಗಾವಲು ವಾಹನದ ಮೇಲೆ ಸುಧಾರಿತ ಸ್ಫೋಟಕ ಸಾಧನ (IED) ದಾಳಿ ನಡೆಸಿ 12 ಸೈನಿಕರನ್ನ ಬಿಎಲ್‌ಎ ಹತ್ಯೆಗೈದಿತ್ತು. ಈ ಬೆನ್ನಲ್ಲೇ ಬಲೂಚಿಸ್ತಾನದಾದ್ಯಂತ 39 ಸ್ಥಳಗಳಲ್ಲಿ ದಾಳಿ ನಡೆಸಿ ಪಾಕ್ ಪೊಲೀಸರನ್ನೇ ಅಪಹರಿಸಿತ್ತು.
1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ.