ನ್ಯೂಸ್ ನಾಟೌಟ್: ಕಳೆದ ಒಂದು ತಿಂಗಳಿನಿಂದ ಗುತ್ತಿಗಾರಿನಲ್ಲಿ ಕಾರ್ಯನಿರ್ವಹಿಸದೇ ಬಾಗಿಲು ಮುಚ್ಚಿಕೊಂಡಿದ್ದ ಎಟಿಎಂ ಗೆ ಕೊನೆಗೂ ಜೀವ ಕಳೆ ಬಂದಿದೆ.ಗ್ರಾಮದಲ್ಲಿರುವ ಏಕೈಕ ಎಟಿಎಂ ಗ್ರಾಹಕರಿಗೆ ಸೇವೆ ಒದಗಿಸುವುದಕ್ಕೆ ಸಿದ್ಧವಾಗಿದೆ.ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ನೂತನ ಎಟಿಎಂ ಅಳವಡಿಕೆಗೆ ಮುಂದಾಗಿದ್ದಾರೆ. ಹೀಗಾಗಿ ಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಈ ಕುರಿತು ‘ನ್ಯೂಸ್ ನಾಟೌಟ್’ ಸೇರಿದಂತೆ ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದವು. ಗುತ್ತಿನಾರಿನ ಬ್ಯಾಂಕ್ ಗ್ರಾಹಕರೊಬ್ಬರು ಕರೆ ಮಾಡಿ ಎಟಿಎಂ ಇಲ್ಲದೇ ಜನರಿಗಾಗುತ್ತಿರುವ ತೊಂದರೆ ಬಗ್ಗೆ ಹೇಳಿಕೊಂಡಿದ್ದರು.ಇದರಿಂದಾಗಿ ದಿನ ನಿತ್ಯ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದರ ಬಗ್ಗೆಯೂ ತಮ್ಮ ಅಳಲನ್ನು ತೋಡಿಕೊಂಡಿದ್ದರು.ಹೀಗಾಗಿ ಈ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ‘ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಷ್ಟ್ರೀಕೃತ ಬ್ಯಾಂಕ್ ನ ಏಕೈಕ ಎಟಿಎಂ!!ಒಂದು ತಿಂಗಳಿನಿಂದ ಬಾಗಿಲು ಮುಚ್ಚಿರೋದನ್ನು ಕಂಡು ಗ್ರಾಹಕರ ಪರದಾಟ!’ ಎನ್ನುವ ಶೀರ್ಷಿಕೆಯಡಿಯಲ್ಲಿ ‘ನ್ಯೂಸ್ ನಾಟೌಟ್’ ವರದಿ ಪ್ರಸಾರ ಮಾಡಿತ್ತು. ಇದೀಗ ಗ್ರಾಹಕರ ಒತ್ತಾಯಕ್ಕೆ ಮಣಿದು ಬ್ಯಾಂಕ್ ಅಧಿಕಾರಿಗಳು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.ನೂತನ ಎಟಿಎಂ ಮೆಷಿನ್ ನಿಂದಾಗಿ ಇನ್ನು ಮುಂದೆ ಗ್ರಾಹಕರಿಗೆ ಉತ್ತಮ ಸೇವೆ ದೊರಕಲಿದೆ.
ಏನಾಗಿತ್ತು?
ಗ್ರಾಹಕರ ಬೇಡಿಕೆಯಂತೆ ಕೆಲ ವರ್ಷಗಳ ಹಿಂದೆ ಗುತ್ತಿಗಾರಿನ ಮುಖ್ಯ ಪೇಟೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕಾರ್ಯ ನಿರ್ವಹಿಸುತ್ತಿತ್ತು.ಆದರೆ ಕಳೆದ ಒಂದು ತಿಂಗಳಿಂದ ಆ ಗ್ರಾಮದಲ್ಲಿರುವ ಒಂದೇ ಒಂದು ಎಟಿಎಂನ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಹೀಗಾಗಿ ಹಣ ವಿತ್ ಡ್ರಾ ಮಾಡಲು ಬರುವ ನೂರಾರು ಗ್ರಾಹಕರು ಬಾರಿ ಸಮಸ್ಯೆ ಎದುರಿಸುತ್ತಿದ್ದರು.ಇನ್ಯಾವಾಗ ಬಾಗಿಲು ತೆರೆಯುವುದೋ ಎಂದು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದಾಗಿ ಬ್ಯಾಂಕಿನ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು, ವ್ಯಾಪಾರಸ್ಥರು, ಗ್ರಾಹಕರು, ರೈತರಿಗೆ, ಹೆದ್ದಾರಿಯ ಮೇಲೆ ಸಂಚರಿಸುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿತ್ತು.ಮಾತ್ರವಲ್ಲದೇ ಹಣ ಪಡೆದುಕೊಳ್ಳಲು ಬ್ಯಾಂಕ್ ಎದುರಿನಲ್ಲಿ ಗಂಟೆಗಟ್ಟಲೇ ನಿಂತು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಭಾಗದಲ್ಲಿ ಏಕೈಕ ಎಟಿಎಂ ಯಂತ್ರ ಇದ್ದುದರಿಂದ ನೂರಾರು ಜನರು ಕೆನರಾ ಬ್ಯಾಂಕ್‌ನ ಎಟಿಎಂ ಮೇಲೆ ಅವಲಂಬಿತರಾಗಿದ್ದರು.ಇದು ಬಿಟ್ರೆ ತುಂಬಾ ದೂರ ಪ್ರಯಾಣಿಸಿ ಬೇರೆಡೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಗ್ರಾಹಕರು, ರೈತರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಾಗಿಲು ಮುಚ್ಚಿರುವ ಎಟಿಎಂ ಕಂಡು ಹಣ ಪಡೆದುಕೊಳ್ಳಲು ಸಾಧ್ಯವಾಗದೇ ಬ್ಯಾಂಕ್ ನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿತ್ತು.ಪ್ರತಿ ದಿನ ಕೆಲಸಕ್ಕೆ ಹೋಗಿ ಜೀವನ ನಡೆಸುವವರು ,ಆಫೀಸ್ ಕೆಲಸ ನಿರ್ವಹಿಸುವವರು,ವ್ಯಾಪಾರಸ್ಥರು ಗಂಟೆಗಟ್ಟಲೇ ಬ್ಯಾಂಕ್ ನಲ್ಲಿ ಕುಳಿತುಕೊಳ್ಳಕ್ಕಾಗುತ್ತಾ ಎಂದು ಕೆಲವರು ಪ್ರಶ್ನೆಯನ್ನೂ ಮಾಡಿದ್ದರು.ಒಟ್ಟಾರೆಯಾಗಿ ಇಲ್ಲಿನ ಪ್ರದೇಶದವರಿಗೆ ಹಣ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅದೆಲ್ಲದಕ್ಕು ಉತ್ತರ ಸಿಕ್ಕಂತಾಗಿದೆ.