ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಪೊಲೀಸರು ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಮತ್ತೆ ನೋಟಿಸ್ ನೀಡಿದ್ದಾರೆ. ಈ ಸಂದರ್ಭದಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪತ್ರ ಬರೆದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪುತ್ತೂರಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆ ವೇಳೆ ಅರುಣ ಕುಮಾರ್ ಪುತ್ತಿಲ ಅವರು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸಿ ಭಾಷಣ ಮಾಡಿದ್ದಾರೆ ಎಂದು ಪುತ್ತೂರು ನಗರ ಠಾಣೆಯಲ್ಲಿ ಅಶ್ರಫ್ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಠಾಣೆ ಪೊಲೀಸರು ಅರುಣ ಕುಮಾರ್ ಪುತ್ತಿಲಗೆ ಎರಡನೇ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಅರುಣ್ ಸೂಚನೆ ನೀಡಿದ್ದಾರೆ. ಸೋಮವಾರವಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅರುಣ ಕುಮಾರ್ ಪುತ್ತಿಲಗೆ ಗಡಿಪಾರು ನೋಟಿಸ್ ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂ ಪರ ಕಾರ್ಯಕರ್ತರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು “ರಾಜ್ಯ ಪೊಲೀಸ್ ದೂರು ಪ್ರಾಧಿಕಾರ” ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದು ದೂರು ನೀಡಿದ್ದಾರೆ. “ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದ ಪೊಲೀಸರು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ವ್ಯಾಪಾರಿಗಳು ಮತ್ತು ನಾಗರಿಕರ ಮೇಲೂ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಪೊಲೀಸ್ ಅಧಿಕಾರಿಗಳು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದಾರೆ. ಅವರ ನಿವಾಸಗಳ ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ವಾರಂಟ್ ಗಳು ಇಲ್ಲದೆಯೂ ಜಿಪಿಎಸ್ ಮುಖಾಂತರ ಫೋಟೋ ಸೆರೆ ಹಿಡಿಯುತ್ತಿದ್ದಾರೆ. ಪೊಲೀಸರ ಈ ಕ್ರಮಗಳು ಕಾನೂನು ಬಾಹಿರವಾಗಿದೆ. ಇದು ಮೂಲಭೂತ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ತಕ್ಷಣವೇ ತಾವು ಮಧ್ಯಪ್ರವೇಶ ಮಾಡಬೇಕು. ಪೊಲೀಸರ ಕಾನೂನು ಬಾಹಿರ ಕ್ರಮದ ವಿರುದ್ಧ ತನಿಖೆ ನಡೆಸಬೇಕು” ಎಂದು ಪ್ರಾಧಿಕಾರದ ಮುಖ್ಯಸ್ಥ ನ್ಯಾ. ಸುಧೀಂದ್ರ ರಾವ್ ಗೆ ಮನವಿ ಮಾಡಿ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ವಿರುದ್ಧವೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಹಿಂದೂ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ದೂರು ನೀಡಿದ್ದಾರೆ. ಎಸ್ ಪಿ ನಿಯಮ ಮೀರಿ ಅಕ್ರಮವಾಗಿ ವರ್ತಿಸಿದ್ದಾರೆ. ಯಾವುದೇ ಕೇಸ್ ಗಳಿಲ್ಲದವರ ಮನೆಗೆ ಸಿಬ್ಬಂದಿ ಕಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಮನೆಗೆ ಸಿಬ್ಬಂದಿ ಕಳಿಸಿ ವಿಚಾರಣೆ ನಡೆಸಿದ್ದಾರೆ. ಸೂಕ್ತ ಆದೇಶಗಳಿಲ್ಲದೆ ತಡರಾತ್ರಿ ಹಿಂದೂ ಕಾರ್ಯಕರ್ತರ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ಖಾಸಗಿ ಬದುಕಿನ ಹಕ್ಕು ಎಸ್ ಪಿ ಕಸಿದುಕೊಂಡಿದ್ದಾರೆ. ಹೀಗಾಗಿ ಎಸ್ ಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ..! ಸಚಿವರು ನೀಡಿದ ಕಾರಣವೇನು..?