ಗುತ್ತಿಗಾರು: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನುವ ಮಾತಿದೆ. ಅಂತೆಯೇ ಇಲ್ಲಿ ಒಬ್ಬ ಅಡಿಕೆ ಕಳ್ಳ ದೇವರಿಗೆ ಮೊರೆ ಇಟ್ಟ ನಂತರ ಸಿಕ್ಕಿಬಿದ್ದ ಘಟನೆ ನಡೆದಿದೆ. ಕಾಕತಾಳೀಯ ವಿಚಾರವಾದರೂ ಇದನ್ನು ನಂಬಲೇಬೇಕು.
ಏನಿದು ಘಟನೆ?
ಗುತ್ತಿಗಾರಿನ ವಳಲಂಬೆ ಬಳಿಯ ಪುರ್ಲುಮಕ್ಕಿಯ ಎನ್ ಎಲ್ ಈಶ್ವರ ಅವರ ತೋಟದಿಂದ ಅ.25 ರ ರಾತ್ರಿ ಹಣ್ಣಡಿಕೆ ಕಳವಾಗಿತ್ತು. ಮನೆಯಿಂದ ಕೊಂಚ ದೂರದಲ್ಲಿರುವ ತೋಟದಲ್ಲಿ ಅಡಿಕೆ ಗೊಂಚಲು ಕದ್ದು ಅಡಿಕೆ ತೆಗೆದು ಖಾಲಿ ಗೊಂಚಲನ್ನು ತೋಟದಲ್ಲಿ ಬಿಸಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಮನೆಯವರು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷವೆಂದರೆ ಅಡಿಕೆ ಕದ್ದು ಅದನ್ನು ಅಂಗಡಿಗೆ ಮಾರಲು ಪ್ರಯತ್ನಿಸುತ್ತಿದ್ದಾಗ ವೇಣುಗೋಪಾಲ್ ಎಂಬ ಯುವಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದೀಗ ಹುಡುಗನನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿದೆ. ಅ.27 ರ ಬೆಳಗ್ಗೆ ಎನ್ ಎಲ್ ಈಶ್ವರ ಅವರು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅಡಿಕೆ ಕದ್ದ ಕಳ್ಳ ಯಾರೆಂದು ಗೊತ್ತಾಗಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಆ ದೇವರ ಶಕ್ತಿಯಿಂದಲೇ ಕಳ್ಳ ಸಿಕ್ಕಿಬಿದ್ದ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
previous post