ನ್ಯೂಸ್ ನಾಟೌಟ್: ಗಾಯಕಿ ಅರ್ಚನಾ ಉಡುಪ ಹಾಡುತ್ತಿಲ್ಲ, ಅವರ ಆರೋಗ್ಯ ಸರಿ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಮಾನಸಿಕವಾಗಿ ತನಗೆ ತುಂಬಾ ಕಿರಿಕಿರಿಯಾಗುತ್ತಿದೆ ಎಂದಿರುವ ಅರ್ಚನಾ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ತಾನು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಹಿಂದಿಗಿಂತಲೂ ಹೆಚ್ಚು ಬಿಝಿಯಾಗಿದ್ದೇನೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ಚನಾ, “ಮೂರು ನಾಲ್ಕು ವರ್ಷಗಳ ಹಿಂದೆ ನಾನೊಂದು ಸಂದರ್ಶನ ನೀಡಿದ್ದೆ. ಅದರಲ್ಲಿ ನನಗೆ 20 ವರ್ಷಗಳ ಹಿಂದೆ ನನಗೆ ಗಂಟಲಿನ ಸಮಸ್ಯೆ ಉಂಟಾಗಿ ಹಾಡಲು ಆಗುತ್ತಿರಲಿಲ್ಲ ಎಂದಿದ್ದೆ. ಜೊತೆಗೆ ನಾನು ಅದರಿಂದ ಹೇಗೆ ಹೊರಬಂದೆ ಎನ್ನುವುದನ್ನು ಹೇಳಿದ್ದೆ. ಆದರೆ ಕೇವಲ ಹಾಡಲು ಆಗುತ್ತಿರಲಿಲ್ಲ ಎಂಬ ತುಣುಕನ್ನಷ್ಟೇ ವೈರಲ್ ಮಾಡಿ, ನಾನು ಹಾಡು ನಿಲ್ಲಿಸಿದ್ದೇನೆ, ಗಂಟಲು ಹೊರಟು ಹೋಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ನನಗೆ ತುಂಬಾ ನೋವು ಕೊಟ್ಟಿದೆ. ಎಲ್ಲಿ ಹೋದರೂ ನಿಮ್ಮ ಆರೋಗ್ಯ ಹೇಗಿದೆ? ಈಗಲೂ ಹಾಡುತ್ತಿದ್ದೀರ ಎಂದು ಕೇಳುತ್ತಾರೆ. ನಾನು ಮೊದಲಿಗಿಂತ ಹೆಚ್ಚು ಬಿಝಿ ಇದ್ದೇನೆ” ಎಂದು ಹೇಳಿದ್ದಾರೆ.
View this post on Instagram
“ಇದರ ಜೊತೆಗೆ ನಾನು ಶಾರ್ಟ್‌ಹೇರ್ ಮಾಡಿಸಿರುವ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಯಾನ್ಸರ್ ಬಂದ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂದು. ನಾನು ಒಂದು ಹೊಸ ಧಾರಾವಾಹಿಯಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಹೇರ್ ಕಟ್ ಮಾಡಿಸಿಕೊಳ್ಳಬೇಕು ಅಂತ ಚಾನೆಲ್ ನವರು ಹೇಳಿದ್ದರಿಂದ ನಾನು ಹೀಗೆ ಮಾಡಿಸಿಕೊಳ್ಳಬೇಕಾಯಿತು. ಅದು ಬಿಟ್ಟರೆ ನನಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ” ಎಂದಿರುವ ಅರ್ಚನಾ, ಇಂತಹ ಊಹಾಪೋಹಾಗಳಿಂದ ನಮ್ಮ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ನೋವಾಗಿದೆ ಎಂದಿದ್ದಾರೆ.