ಆನೆಗುಂಡಿ: ಇಲ್ಲಿ ಲಾರಿ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಸಹೋದರರಿಬ್ಬರ ಕಾಲು ಮುರಿತಗೊಂಡ ಘಟನೆ ಏ.17ರಂದು ನಡೆದಿದೆ.
ಸದ್ಯ ಗಾಯಾಳುಗಳು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಹೇಗಾಯಿತು..?
ಜಾಲ್ಸೂರು ಗ್ರಾಮದ ಕುಂದ್ರುಕೋಡಿ ನಾರಾಯಣ ನಾಯ್ಕರ ಪುತ್ರ ಕಿರಣ ಅವರ ಕಾರಿನಲ್ಲಿ ಬಾಳಾಜೆಯ ಸುಂದರ ಗೌಡರ ಪುತ್ರರಾದ ದೀಪಕ್ ಹಾಗೂ ದೀಕ್ಷಿತ್ ಅವರು ಪುತ್ತೂರಿಗೆ ತೆರಳುತ್ತಿದ್ದ ವೇಳೆ ರಾತ್ರಿ 11.30ರ ವೇಳೆಗೆ ಮುಂಭಾಗದಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ದೀಪಕ್, ಹಾಗೂ ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅವರ ಸಹೋದರ ದೀಕ್ಷಿತ್ ಅವರ ಬಲಕಾಲು ತೀವ್ರ ಜಖಂಗೊಂಡಿತೆನ್ನಲಾಗಿದೆ. ಕಾರಿನಲ್ಲಿದ್ದ ಕಿರಣ ಹಾಗೂ ಇನ್ನಿಬ್ಬರಿಗೂ ಅಲ್ಪಸ್ವಲ್ಪ ಗಾಯಗಳಾಗಿದೆ. ಎಲ್ಲರನ್ನೂ ಸುಣ್ಣಮೂಲೆಯ ಹಸನ್ , ಜುನೈದ್ , ಅಶ್ರಫ್ ಮತ್ತಿತರ ಯುವಕರು ಸೇರಿ ಸುಳ್ಯದ ಸರಕಾರಿ ಆಸ್ಪತ್ರೆ ಹಾಗೂ ಕೆವಿಜಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಗಂಭೀರ ಗಾಯಗೊಂಡವರನ್ನು ಮಂಗಳೂರಿಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.