ನ್ಯೂಸ್ ನಾಟೌಟ್: ಆನಂದ ಗುರೂಜಿಯ ಕಾರು ಅಡ್ಡಿಗಟ್ಟಿ ಹಣಕ್ಕೆ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಆನಂದ ಗುರೂಜಿ ಬೆಂಗಳೂರಿನ ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಸಂಬಂಧ ಪೊಲೀಸರು, ಕೃಷ್ಣಮೂರ್ತಿ(ಎ1) ಹಾಗೂ ಟಿವಿಯ ಸುದ್ದಿ ನಿರೂಪಕಿಯಾಗಿದ್ದ ದಿವ್ಯಾ ವಸಂತ (ಎ2) ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆನಂದ ಗುರೂಜಿ ವಿಡಿಯೋ ಹಾಗೂ ಜಮೀನು ಖರೀದಿ ಪ್ರಕರಣ ಸಂಬಂಧ ಕೋರ್ಟ್ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಸಹ ಈ ಪ್ರಕರಣ ಸಂಬಂಧ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ.
ವಿಡಿಯೋ ಇದೆ ಎಂದು ಆನಂದ್ ಗುರೂಜಿಗೆ ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕೋರ್ಟ್ನಿಂದ ತಡೆಯಾಜ್ಞೆ ತಂದರೂ ಹಣಕ್ಕಾಗಿ ಬೆದರಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಚಿಕ್ಕಜಾಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹಲವಾರು ಯುಟ್ಯೂಬ್ ಚಾನೆಲ್ ಗಳ ಮೂಲಕ ಮಾನಹಾನಿ ಮಾಡಿದ್ದಾರೆ. ಮುಖವಾಡ, ಸಾಮ್ರಾಟ್ ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲೂ ಚಾರಿತ್ರ್ಯ ತೇಜೋವಧೆ ಮಾಡಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕೃಷ್ಣಮೂರ್ತಿ ಎ1 ಆರೋಪಿಯಾಗಿದ್ದರೆ, ದಿವ್ಯಾ ವಸಂತ ಎ2 ಆರೋಪಿಯಾಗಿದ್ದಾರೆ.
ಕನ್ನಡದ ನಟಿಯೊಬ್ಬಳು ಮದುವೆಯಾಗಿ ಗರ್ಭಿಣಿಯಾದಾಗ… ”ಇದು ಇಡೀ ರಾಜ್ಯವೇ ಖುಷಿಪಡುವ ವಿಚಾರ” ಎಂದು ಹೇಳುವ ಮೂಲಕ ಭಾರೀ ಟ್ರೋಲ್ ಗೆ ಒಳಗಾಗಿದ್ದ ಟಿವಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ವಿರುದ್ಧ ಈ ಹಿಂದೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧನವಾಗಿದ್ದಳು. ಇಂದಿರಾ ನಗರದ ಬ್ಯೂಟಿ ಪಾರ್ಲರ್ ನಲ್ಲಿ ಸ್ಟಿಂಗ್ ಆಪರೇಷನ್ ನಡೆಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಳು, ಈ ಸಂಬಂಧ ಪಾರ್ಲರ್ ಮಾಲೀಕರು ನೀಡಿದ್ದ ಹನಿಟ್ರ್ಯಾಪ್ ದೂರಿನ ಮೇರೆಗೆ ದಿವ್ಯಾ ವಸಂತಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.