ನ್ಯೂಸ್ ನಾಟೌಟ್: ರಜೆಯ ಸಮಯ ಕಳೆಯಲು ಅಮೆರಿಕಾಕ್ಕೆ ತೆರಳಿದ ಭಾರತೀಯ ಕುಟುಂಬವೊಂದು ಅಮೆರಿಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಜೀವ ದಹನವಾಗಿದೆ. ಮೃತ ದಂಪತಿಯನ್ನು ತೇಜಸ್ವಿನಿ ಮತ್ತು ಶ್ರೀ ವೆಂಕಟ್ ಎಂದು ಗುರುತಿಸಲಾಗಿದೆ. ಈ ಅವಘಡದಲ್ಲಿ ದಂಪತಿಯ ಇಬ್ಬರು ಮಕ್ಕಳು ಕೂಡ ದುರಂತ ಸಾವಿಗೀಡಾಗಿದ್ದಾರೆ.
ವೆಂಕಟ್ ಮತ್ತು ತೇಜಸ್ವಿನಿ ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಹೈದರಾಬಾದ್‌ನಿಂದ ರಜೆಯ ಮೋಜಿಗೆಂದು ಡಲ್ಲಾಸ್‌ಗೆ ಹೋಗಿದ್ದರು. ಅವರೆಲ್ಲರೂ ಕಾರಿನಲ್ಲಿ ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ, ಒಂದು ವಾರ ಅಟ್ಲಾಂಟಾದಲ್ಲಿ ಇದ್ದರು. ಬಳಿಕ ಡಲ್ಲಾಸ್‌ಗೆ ಹಿಂತಿರುಗುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಡಲ್ಲಾಸ್‌ಗೆ ಹಿಂತಿರುಗುವಾಗ ಗ್ರೀನ್ ಕೌಂಟಿ ಪ್ರದೇಶದಲ್ಲಿ ತಪ್ಪು ದಾರಿಯಲ್ಲಿ ಬಂದ ಮಿನಿ ಟ್ರಕ್, ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಇಡೀ ಕುಟುಂಬ ಸಜೀವ ದಹನವಾಗಿದೆ.
ಅಮೆರಿಕ ಪೊಲೀಸರು ಮೂಳೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಜೀವಂತವಾಗಿ ಸುಟ್ಟು ಕರಕಲಾದ ಸುದ್ದಿ ತಿಳಿದು ವೆಂಕಟ್ ದಂಪತಿಯ ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ. ಇದೇ ರೀತಿ ನ್ಯೂಯಾರ್ಕ್‌ನಲ್ಲಿ ನಡೆದ ಮಾರಕ ರಸ್ತೆ ಅಪಘಾತದಲ್ಲಿ ಕ್ಲೀವ್‌ಲ್ಯಾಂಡ್ ಸ್ಟೇಟ್ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಕಾನ್ಸುಲೇಟ್ ಮಂಗಳವಾರ ತಿಳಿಸಿದೆ. ವಿದ್ಯಾರ್ಥಿಗಳನ್ನು 20 ವರ್ಷದ ಮಾನವ್ ಪಟೇಲ್ ಮತ್ತು 23 ವರ್ಷದ ಸೌರವ್ ಪ್ರಭಾಕರ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.