ನ್ಯೂಸ್‌ನಾಟೌಟ್: ಭಾರೀ ಮಳೆಗೆ ನಲುಗಿದ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಭೂಕುಸಿತದಿಂದ ಪ್ರವಾಹ ಉಂಟಾಗಿ ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಂತರ ಮಳೆಯಿಂದಾಗಿ 60ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹದಲ್ಲಿ ಕುಟುಂಬವೊಂದು ಕೊಚ್ಚಿಕೊಂಡು ಹೋಗಿದ್ದು, 11 ತಿಂಗಳ ಮಗು ಪವಾಡ ಸದೃಶವಾಗಿ ಬದುಕುಳಿದಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಘಟನೆ..?
ಹಿಮಾಚಲ ಪ್ರದೇಶದ ಸೆರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 30ರ ರಾತ್ರಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಕುಟುಂಬವೊಂದು ಕೊಚ್ಚಿಕೊಂಡು ಹೋಗಿದ್ದು, ಪುಟ್ಟ ಮಗು ಬದುಕಿ ಉಳಿದಿದೆ. ನಿಕಿತಾ ಎನ್ನುವ 11 ತಿಂಗಳ ಮಗು ಮನೆಯಲ್ಲಿ ಮಲಗಿತ್ತು. ಈ ವೇಳೆ ಮಗುವಿನ ಕುಟುಂಬಸ್ಥರು ಏಕಾಏಕಿ ಹರಿದ ಪ್ರವಾಹದ ನೀರನ್ನು ಬೇರೆ ದಿಕ್ಕಿಗೆ ತಿರುಗಿಸಲು ಯತ್ನಿಸಿದ್ದಾರೆ ಆದರೆ ಅದು ಸಾಧ್ಯವಾಗದೆ ಇದ್ದಾಗ, ಇಡೀ ಕುಟುಂಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ವರದಿ ತಿಳಿಸಿದೆ. ನಿಕಿತಾಳ ತಂದೆ ರಮೇಶ್, ತಾಯಿ ರಾಧಾ ಮತ್ತು ಅಜ್ಜಿ ಪೂರ್ಣು ದೇವಿ ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಗು ನಿಕಿತಾ ಮನೆಯ ಒಳಗೆ ಮಲಗಿತ್ತು. ಹೀಗಾಗಿ ಸುರಕ್ಷಿತವಾಗಿದೆ ಎಂದು ವರದಿ ತಿಳಿಸಿದೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮಗುವನ್ನು ಪಡೆದು ಆರೈಕೆ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರ ಹೆಗಲ ಮೇಲೆ ಏನೂ ಅರಿಯದ ನಿಕಿತಾ ಆಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಬದುಕುಳಿದಿರುವ 11 ತಿಂಗಳ ಮಗುವನ್ನು ಸಂಬಂಧಿ ಮಹಿಳೆಗೆ ಹಸ್ತಾಂತರ ಮಾಡಲಾಗಿದೆ.