ನ್ಯೂಸ್ ನಾಟೌಟ್: ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ An-24 ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
ಪ್ರಸ್ತುತ ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಲ್ಲಿನ ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನ ಹಾರಾಟದ ನಡುವೆಯೇ ವಾಯು ಸಂಚಾರ ನಿಯಂತ್ರಕರು ವಿಮಾನದೊಂದಿಗಿನ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾದ An-24 ಪ್ರಯಾಣಿಕ ವಿಮಾನ ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿತ್ತು. ಈ ವಿಮಾನವು ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣವನ್ನು ಸಮೀಪಿಸುವಾಗ ರಾಡಾರ್‌ನಿಂದ ಕಣ್ಮರೆಯಾಯಿತು ಎಂದು ಸ್ಥಳೀಯ ತುರ್ತು ಸಚಿವಾಲಯ ತಿಳಿಸಿದೆ. ವಿಮಾನ ಹುಡುಕಲು ಅಗತ್ಯವಿರುವ ಎಲ್ಲಾ ಪಡೆಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆರು ಸಿಬ್ಬಂದಿ ಹಾಗೂ ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ತಿಳಿದು ಬಂದಿದೆ.