ನ್ಯೂಸ್ ನಾಟೌಟ್ : ಸದಾ ಒಂದಿಲ್ಲೊಂದು ಕಾಮೆಂಟ್ ಮೂಲಕ ವಿವಾದಗಳಿಂದಲೇ ಸುದ್ದಿಯಾದ ನಟ ಪ್ರಕಾಶ್ ರಾಜ್ ಇದೀಗ ಮತ್ತೊಂದು ವಿವಾದದ ಹೇಳಿಕೆಯೊಂದನ್ನು ನೀಡಿದ್ದಾರೆ.ಮಸೀದಿ ಅಗೆದರೆ ಮಂದಿರ ಸಿಗುತ್ತದೆ, ಆದರೆ ದೇವಸ್ಥಾನಗಳನ್ನು ಅಗೆದರೆ ಬುದ್ಧನ ಪ್ರತಿಮೆ ಸಿಗುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ರಕಾಶ್ ರಾಜ್ ಈ ಹಿಂದೆಯೂ ಇಂತಹ ಹೇಳಿಕೆ ನೀಡುತ್ತಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.ಇವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಖಳ ನಟನ ಪಾತ್ರದಿಂದ ಹಿಡಿದು ತಂದೆ, ಗೆಳೆಯ ಹೀಗೆ ಹಲವು ಪಾತ್ರಗಳಲ್ಲಿ ನಟಿಸಿರುವ ಪ್ರಕಾಶ್ ಅವರ ನಟನೆಗೆ ಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಹೊರತಾಗಿ ರಾಜ್ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ.ಆದರೆ ಒಮ್ಮೊಮ್ಮೆ ಇಂತಹ ಹೇಳಿಕೆ ನೀಡುತ್ತಾ ವೈರಲ್ ಕೂಡ ಆಗುತ್ತಾರೆ.
ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಮಾಡಿರುವ ಕೆಲವು ಕಾಮೆಂಟ್‌ಗಳು ವಿವಾದಕ್ಕೀಡಾಗಿದ್ದವು. ಇದೀಗ ರಾಮಮಂದಿರದ ಬಗ್ಗೆ ಪ್ರಕಾಶ್ ರಾಜ್ ನೀಡಿರುವ ಹೇಳಿಕೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಮಸೀದಿಯನ್ನು ಅಗೆದರೆ ದೇಗುಲಗಳು, ಮಂದಿರಗಳನ್ನು ಅಗೆದರೆ ಬುದ್ಧನ ಪ್ರತಿಮೆಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.
ಇದಕ್ಕೂ ಮುನ್ನ ರಾಮ ಮಂದಿರದ ಬಗ್ಗೆ ಮಾತನಾಡಿದ್ದ ಅವರು, ನೀವು ರಾಮನ ಭಕ್ತರಾಗಿ, ನನಗೆ ಯಾವುದೇ ತೊಂದರೆ ಇಲ್ಲ. ಯೇಸುವಿನ ಭಕ್ತರಾಗಿ ಅದಕ್ಕೂ ಯಾವುದೇ ಸಮಸ್ಯೆ ಇಲ್ಲ. ಅಲ್ಲಾಹನ ಭಕ್ತನಾಗು ಇದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಅಂಧ ಭಕ್ತನಾಗಬೇಡಿ ಎಂದು ಹೇಳಿದ್ದರು. ಇದೀಗ ರಾಮಮಂದಿರದ, ವಾರಣಾಸಿಯ ಜ್ಞಾನವಾಪಿ ಮಸೀದಿ ಬಗ್ಗೆ ಮಾತನಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.