ಭಕ್ತಿಭಾವ

ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಸಿದ್ಧತೆ

486

ನ್ಯೂಸ್ ನಾಟೌಟ್: ಒಕ್ಕಲಿಗ ಸಮುದಾಯದ ಹೃದಯ ಸಿಂಹಾಸನದಲ್ಲಿ ಸದಾ ವಿರಾಜಮಾನರಾಗಿರುವ ಆದಿಚುಂಚನಗಿರಿಯ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಪುತ್ತೂರಿನ ಗೌಡ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಪೂರ್ವಭಾವಿ ಸಭೆ ನಡೆಯಿತು.

ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಉಡುಪಿ ಸೇರಿದಂತೆ ಕರಾವಳಿಯ ಹಲವು ಕಡೆಯಿಂದ ಗೌಡ ಸಮುದಾಯದ ನಾಯಕರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ತಯಾರಿ ಬಗ್ಗೆ ಸಲಹೆ-ಸೂಚನೆ ನೀಡಿದರು. ಶಾಸಕ ಸಂಜೀವ ಮಠಂದೂರು ಸಭೆಯಲ್ಲಿ ಭಾಗಿಯಾಗಿ ಪೂರ್ವ ತಯಾರಿಯ ಕುರಿತು ಸ್ವಾಮೀಜಿ ಹಾಗೂ ಮುಖಂಡರ ಜತೆಗೆ ಚರ್ಚೆ ನಡೆಸಿದರು. ಮೂರು ಗಂಟೆಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಯಾದವು.

ಡಾ. ಬಾಲಗಂಗಾಧರನಾಥ ಮಹಾಸ್ವಾಮಿ ಅವರ ೭೮ನೇ ಜಯಂತ್ಸೋತ್ಸವದ ಕಾರ್ಯಕ್ರಮ ಹೇಗಿರಬೇಕು?, ಮುಖ್ಯ ಅತಿಥಿಗಳು ಯಾರಾಗಿರಬೇಕು?, ಹಣದ ಖರ್ಚು ವೆಚ್ಚ ಸೇರಿದಂತೆ ಹಲವಾರು ವಿಚಾರಗಳು ಚರ್ಚೆಯಲ್ಲಿ ಮುನ್ನೆಲೆಗೆ ಬಂದವು. ಈ ವೇಳೆ ಮಾತನಾಡಿದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಒಕ್ಕಲಿಗ ಸಮುದಾಯ ಈಗಾಗಲೇ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಅದ್ಧೂರಿ ಮೆರವಣಿಗೆ ಮೂಲಕ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಯಶಸ್ವಿಯಾಗಿ ಪ್ರತಿಷ್ಠಾಪಿಸಿದೆ. ಸ್ವತಂತ್ರ್ಯ ಹೋರಾಟಗಾರನಿಗೆ ಗೌರವ ನೀಡುವ ಮೂಲಕ ಇಡೀ ದೇಶವೇ ಕರಾವಳಿಯತ್ತ ತಿರುಗಿ ನೋಡುವಂತಹ ಕೆಲಸವನ್ನು ಮಾಡಿದ್ದೇವೆ. ಇದೀಗ ಸಮುದಾಯದ ಬಾಂಧವರು ಮಹಾಸ್ವಾಮಿ ಅವರ ೭೮ನೇ ಜಯಂತ್ಸೋತ್ಸವ ಕಾರ್ಯಕ್ರಮಕ್ಕೂ ಇಂತಹುದೇ ಒಂದು ದೊಡ್ಡ ಮಟ್ಟದ ಸಹಕಾರ ನೀಡಬೇಕು. ಪ್ರತಿ ಒಕ್ಕಲಿಗ ಮನೆಯಿಂದ ಜನವರಿ ೨೨ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಂಸ್ಮರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಡಾ.ಶ್ರೀ ಧರ್ಮಪಾಲನಾಥ  ಸ್ವಾಮೀಜಿಯವರ ಅಧ್ಯಯನ ಗ್ರಂಥ ಲೋಕಾರ್ಪಣೆ
ಮಹಾಸ್ವಾಮಿ ಅವರ ೭೮ನೇ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ  ಸ್ವಾಮೀಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿರುವ ಮಹಾಪ್ರಬಂಧ ‘ಸಂಸ್ಕೃತ-ಸಂಸ್ಕೃತಿಗೆ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ’ ಒಂದು ಅಧ್ಯಯನ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ನಾಡಿನ ಮಠಾಧೀಶರು, ಸಾಹಿತಿಗಳು, ಸಾಧು ಸಂತರು, ರಾಜಕೀಯ ನೇತಾರರ ಸಮ್ಮುಖದಲ್ಲಿ ಇದು ಬಿಡುಗಡೆಗೊಳ್ಳುತ್ತಿರುವುದು ವಿಶೇಷವಾಗಿದೆ.

ಪೂಜ್ಯ ಮಹಾಸ್ವಾಮಿ ಅವರ ೭೮ನೇ ಜಯಂತ್ಸೋತ್ಸವ ಮಾಡುವುದಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ಶಾಸಕ ಸಂಜೀವ ಮಠಂದೂರು ಸಭೆಯಲ್ಲಿ ತಿಳಿಸಿದರು. ಸ್ವಾಮೀಜಿಯವರ ಜಯಂತ್ಸೋತ್ಸವದಲ್ಲಿ ಸಮುದಾಯದ ಪ್ರತಿಯೊಬ್ಬ ಮಂದಿಯೂ ಭಾಗವಹಿಸಬೇಕು. ಇದಕ್ಕಾಗಿ ಆಗಬೇಕಿರುವ ಮುಂದಿನ ಎಲ್ಲ ಕೆಲಸವನ್ನು ಯಶಸ್ವಿಯಾಗಿ ಮಾಡೋಣ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸೋಣ ಎಂದು ತಿಳಿಸಿದರು. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ , ಸುಳ್ಯ ತಾಲೂಕು ತರುಣ ಘಟಕ ಗೌಡರ ಯುವ ಸೇವ ಸಂಘ ಅಧ್ಯಕ್ಷ ರಜತ್ ಗೌಡ , ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ  ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕಡಬ ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಉಡುಪಿ ಜಿಲ್ಲಾ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ, ಡಾ. ಬಾಲಗಂಗಾಧರನಾಥ ಮಹಾಸ್ವಾಮಿ ಅವರ ೭೮ನೇ ಜಯಂತ್ಸೋತ್ಸವ ಸ್ವಾಗತ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ರಂಜನ್ ಗೌಡ ಬೆಳ್ತಂಗಡಿ, ಪುರುಷೋತ್ತಮ ಮುಂಗ್ಲಿಮನೆ, ಗೌರಿ ಬನ್ನೂರು ಸೇರಿದಂತೆ ಹಲವಾರು ಒಕ್ಕಲಿಗ ಸಂಘದ ನಾಯಕರು ಹಾಜರಿದ್ದರು.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget