ನ್ಯೂಸ್ ನಾಟೌಟ್: ಸೂರತ್ನಿಂದ ಜೈಪುರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನದ ಮೇಲೆ ಜೇನುನೊಣಗಳ ಗುಂಪೊಂದು ದಾಳಿ ಮಾಡಿದ ಪರಿಣಾಮ ವಿಮಾನ ಹಾರಾಟದಲ್ಲಿ ಒಂದು ಗಂಟೆ ವಿಳಂಬವಾದ ಘಟನೆ ಸೋಮವಾರ (7) ಸಂಜೆ ನಡೆದಿದೆ.
ಸೂರತ್ ವಿಮಾನ ನಿಲ್ದಾಣದಿಂದ ಸಂಜೆ 4.20ಕ್ಕೆ ಜೈಪುರಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನ 6E-7485 ಟೇಕ್‌ಆಫ್‌ಗೆ ಸಿದ್ಧವಾಗಿತ್ತು. ಪ್ರಯಾಣಿಕರು ವಿಮಾನವನ್ನು ಹತ್ತಿ ಕುಳಿತಿದ್ದರು. ಆದರೆ ವಿಮಾನದ ಹಿಂಭಾಗದ ಲಗೇಜ್ ಹೋಲ್ಡ್‌ನ ಸುತ್ತಲೂ ಜೇನುನೊಣಗಳ ದೊಡ್ಡ ಗುಂಪು ಕುಳಿತ್ತಿದ್ದನ್ನು ಅಲ್ಲಿನ ಸಿಬ್ಬಂದಿ ಗಮನಿಸಿದ್ದಾರೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ, ಜೇನು ನೊಣಗಳು ಕುಳಿತಿದ್ದ ಸ್ಥಳದ ಮೇಲೆ ನೀರನ್ನು ಸಿಂಪಡಿಸಿದ ಬಳಿಕ ಜೇನುನೊಣಗಳು ಆ ಸ್ಥಳದಿಂದ ಚದುರಿದವು ಎಂದು ತಿಳಿದುಬಂದಿದೆ.
ನಂತರ ಇಂಡಿಗೋ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸಮನ್ವಯ ಸಾಧಿಸಿ, ಜೇನುನೊಣಗಳಿಗೆ ಹಾಗೂ ವಿಮಾನಕ್ಕೆ ತಾಂತ್ರಿಕ ಹಾನಿಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಿದ್ದಾರೆ. ಸಂಜೆ 4.20ಕ್ಕೆ ಹೊರಡಬೇಕಿದ್ದ ವಿಮಾನ, ಅಂತಿಮವಾಗಿ ಸಂಜೆ 5.26ಕ್ಕೆ, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಹೊರಟಿದೆ. ಈ ಘಟನೆಯ ಬಗ್ಗೆ ಇಂಡಿಗೋ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಮೂಲಗಳ ಪ್ರಕಾರ, ಮಳೆಗಾಲದ ತಿಂಗಳುಗಳಾದ್ದರಿಂದ ಜೇನುನೊಣಗಳ ಹಿಂಡುಗಳು ಸಾಮಾನ್ಯವಾಗಿ ಕಂಡುಬಂದಿವೆ ಎಂದು ಹೇಳಲಾಗಿದೆ. ಇನ್ನೂ ಸೂರತ್ ವಿಮಾನ ನಿಲ್ದಾಣದಲ್ಲಿ ಜೇನುನೊಣಗಳ ಹಿಂಡಿನಿಂದಾಗಿ ಇಂಡಿಗೊ ವಿಮಾನದ ವಿಳಂಬವು ಅಪರೂಪದ ಘಟನೆಯಾಗಿದೆ. ಜೇನುನೊಣಗಳ ಹಿಂಡು ವಿಮಾನದ ಸರಕು ಬಾಗಿಲಿನ ಮೇಲೆ ಕುಳಿತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.