ನ್ಯೂಸ್ ನಾಟೌಟ್: ಹಲವರಿಗೆ ಹಲವು ರೀತಿಯಲ್ಲಿ ವಂಚಿಸಿದ್ದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.ಸದ್ಯ ಈತ ಇತರರಿಗೆ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಇತ್ತೀಚೆಗೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ್ದ ಎನ್ನಲಾಗಿದೆ. ಮಾತ್ರವಲ್ಲದೇ ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಕಾಡು ಹಂದಿ ಉರುಳಿಗೆ ಬಿದ್ದಿದೆ, ಮಾಂಸ ಬೇಕಾದರೆ ಹೇಳಿ ಎಂದು ಈತ ಹೇಳಿದ್ದ ಎನ್ನಲಾಗಿದ್ದು, ಈ ವೇಳೆ ಮಹಿಳೆಯು ಅದನ್ನು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಕಾಣ ಸಿಕ್ಕಿದ್ದಾರೆ. ಕೂಡಲೇ ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ಮುಂದುವರಿಸಿದಾಗ ಈತ ಕಡಬ ತಾಲೂಕಿನ ಮರ್ದಾಳದ ವ್ಯಕ್ತಿ ಎಂದು ತಿಳಿದು ಬಂದಿದೆ.
ಈತ ಈ ಹಿಂದೆಯೂ ಕೂಡ ಹಲವರಿಗೆ ವಿವಿಧ ರೀತಿಯಲ್ಲಿ ವಂಚಿಸಿರುವುದು ತಿಳಿದು ಬಂದಿದೆ.ದೂರು ನೀಡಲು ಯಾರೂ ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಬಿಟ್ಟಿರುವುದಾಗಿ ಸುಬ್ರಹ್ಮಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈತ ಕಟ್ಟಿಗೆ ಇದೆ ಎಂದು ಹೇಳಿ ಕುಲ್ಕುಂದ ಭಾಗದಲ್ಲಿಯೂ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ. ಸದ್ಯ ಈತನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿ ಹಲವಾರು ಮಂದಿ ಹಂಚಿಕೊಂಡಿದ್ದು ಇನ್ನು ಮುಂದೆ ಈ ವ್ಯಕ್ತಿಯಿಂದ ಯಾರೂ ಮೋಸ ಹೋಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿಯೂ ಕೆಡ್ಡಸದ ಸಂದರ್ಭ ಮತ್ತೊಬ್ಬರು ವ್ಯಕ್ತಿಗೆ ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಎಡಮಂಗಲದಲ್ಲಿ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ ಹಣ ಪಡೆದಿದ್ದ. ಇದೇ ಸಂದರ್ಭ ಹಿರಿಯ ವ್ಯಕ್ತಿಯನ್ನು ಪಾಲೋಲಿ ಸೇತುವೆ ಬಳಿ ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ವಂಚಿಸಿದ್ದ. ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ.ಇದೀಗ ಆತ ಪೊಲೀಸರ ವಶದಲ್ಲಿದ್ದಾನೆ.