ನ್ಯೂಸ್ ನಾಟೌಟ್:ನವಜಾತ ಶಿಶುಗಳ ಬಗ್ಗೆ ಎಷ್ಟು ಕೇರ್ ತಕೊಂಡರೂ ಸಾಲೋದಿಲ್ಲ.ಒಂದು ಸಣ್ಣ ಎಡವಟ್ಟುಗಳಾದರೂ ಮಗುವಿನ ಮೇಲೆ ಅಡ್ಡ ಪರಿಣಾಮಗಳಾಗೋ ಸಾಧ್ಯತೆಗಳೇ ಹೆಚ್ಚು. ಇದೀಗ ಒಂದೂವರೆ ತಿಂಗಳ ಶಿಶುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿ, ವೈದ್ಯನೋರ್ವ ನಿರ್ಲಕ್ಷ್ಯ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ಯಾದಗಿರಿ (Yadagiri) ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ.
ತುಮಕೂರಿನ (Tumakuru) ಕುಣಿಗಲ್ (Kunigal) ಮೂಲದ ತ್ಯಾಗರಾಜ ಮತ್ತು ದೇವಿಕಾ ದಂಪತಿಯ ಮಗುವಿಗೆ ಲಸಿಕೆ ಹಾಕಿದ್ದಾರೆ. ಮಗು ಜನಿಸಿದ 45 ದಿನಗಳ ನಂತರ ಬಿಸಿಜಿ/ಹೆಕ್ಸಾಕ್ಸಿಮ್ ಲಸಿಕೆ ಹಾಕಿಸಬೇಕಾಗಿತ್ತು. ಈ ಹಿನ್ನೆಲೆ ತಾಯಿ ದೇವಿಕಾ ಯಾದಗಿರಿಯ ಖಾಸಗಿ ಆಸ್ಪತ್ರೆಗೆ ಲಸಿಕೆ ಹಾಕಿಸಲು ಹೋಗಿದ್ದರು. ಈ ವೇಳೆ ವೈದ್ಯರು ಅದೇ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್‌ನಲ್ಲಿ ಖರೀದಿಸಿದ್ದ 3 ಸಾವಿರ ರೂ. ಬೆಲೆಯ ಲಸಿಕೆಯನ್ನು ಹಾಕಿದ್ದು ನಿರ್ಲಕ್ಷ್ಯ ವಹಿಸಿದ್ದಾರೆ.
ಲಸಿಕೆ ಹಾಕಿಸಿಕೊಂಡು ಮನೆಗೆ ಬಂದ ಪತ್ನಿ, ತನ್ನ ಗಂಡನಿಗೆ ಲಸಿಕೆ ಕವರ್ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಲಸಿಕೆಯ ಕವರ್ ಮೇಲೆ ಎಕ್ಸ್‌ಪೈರಿ ದಿನಾಂಕ ನವೆಂಬರ್ 2022 ಎಂದು ಪ್ರಿಂಟ್ ಆಗಿದೆ. 2 ವರ್ಷ ಅವಧಿ ಮುಗಿದಿರುವ ಲಸಿಕೆ ಹಾಕಿದ್ದನ್ನು ಕಂಡ ಪೋಷಕರು ಆತಂಕಗೊಂಡಿದ್ದಾರೆ.
ಕುಣಿಗಲ್‌ನಿಂದ ಯಾದಗಿರಿಗೆ ದಾಖಲಾತಿಯೊಂದಿಗೆ ಬಂದ ಮಗುವಿನ ತಂದೆ ಡಿಹೆಚ್ ಓ ಬಳಿ ಹೋಗಿ ನಡೆದಿರುವ ಘಟನೆ ಕುರಿತು ಮಾಹಿತಿ ನೀಡಿ, ನನ್ನ ಮಗುವಿನ ಪ್ರಾಣಕ್ಕೆ ಅಪಾಯವಾಗುವ ಲಸಿಕೆ ಹಾಕಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರ ಮುಗ್ಧತೆ ದುರ್ಬಳಕೆ ಮಾಡಿಕೊಂಡು ಮೆಡಿಕಲ್ ಮಾಫಿಯಾ ಮಾಡ್ತಿದ್ದಾರೆಂದು ಆರೋಪಿಸಿ, ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.