ಕರಾವಳಿಕ್ರೈಂಪುತ್ತೂರು

ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿ..!

ನ್ಯೂಸ್‌ ನಾಟೌಟ್‌: ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ದಂಪತಿ ಅನಾಥವಾಗಿ ಬಿಟ್ಟು ಹೋದ ಘಟನೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದಲ್ಲಿ ನಡೆದಿದೆ. ಮಕ್ಕಳ ಹೆತ್ತವರ ಪತ್ತೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ತಬ್ಬಲಿಯಾದ ಮಕ್ಕಳನ್ನು ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಲಾಗಿದೆ.

ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಅಲೆಮಾರಿ ಜನಾಂಗದ ದಂಪತಿ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಆಗಾಗ ಕಾಣಿಸಿಕೊಂಡಿದ್ದರು. ಮದ್ಯ ವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಈ ಎರಡು ಮಕ್ಕಳನ್ನು ಜೂ. 2ರಂದು ಕರಾಯ ಗ್ರಾಮದ ಫಾತಿಮಾ ಎಂಬವರ ಮನೆಯಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಈ ದಂಪತಿ ತಿಳಿಸಿದ್ದರು. ಆದರೆ 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೆ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ಭಾನುವಾರ ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದ್ದಾರೆ.

ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿ ಮೂರು ದಿನವಾದರೂ ವಾಪಾಸ್‌ ಬಾರದಿದ್ದನ್ನು ಗಮನಿಸಿದ ಫಾತಿಮಾ ಸೋಮವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, ಮಕ್ಕಳನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗಿರುವ ದಂಪತಿಯನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಡಾ. ರೇಣುಕಾಪ್ರಸಾದ್ ಕೆ.ವಿ. ನಾಮಪತ್ರ ಸಲ್ಲಿಕೆ

ಕುಕ್ಕರ್‌ ಬಾಂಬ್ ಸ್ಫೋಟ: ಸಂತ್ರಸ್ತ ಆಟೋ ಚಾಲಕನ ಮನೆ ನವೀಕರಣ

ಮತ್ತೆ ಮಲ್ಪೆ ಬೀಚ್ ನ  ಆಕರ್ಷಣೆ ಹೆಚ್ಚಿಸಿದ ರಾಜ್ಯದ ಮೊದಲ ‘ತೇಲುವ ಸೇತುವೆ’,ಅಲೆಗಳ ಮೇಲೆ ಆಟವಾಡಲು ತೇಲುವ ಸೇತುವೆ ರೆಡಿ