ಬೆಂಗಳೂರು

4 ಡಜನ್‌ ಮೊಟ್ಟೆಗೆ ಕೇವಲ 49 ರೂ..! ಆನ್‌ಲೈನ್‌ನಲ್ಲಿ ಖರೀದಿಸಲು ಹೋಗಿ ಬರೋಬ್ಬರಿ 48,199 ರೂ. ಕಳ್ಕೊಂಡ ಮಹಿಳೆ..!

ನ್ಯೂಸ್ ನಾಟೌಟ್: ಮನುಷ್ಯನಿಗೆ ಆಸೆ ಇರಬೇಕು ಆದರೆ ಅತಿಯಾಸೆ ಒಳ್ಳೆಯದಲ್ಲ ಎಂಬ ಮಾತು ಇದೆ. ಆದರೆ ಇಲ್ಲೊಂದು ಮಹಿಳೆಗೆ ಅದೇ ರೀತಿಯ ಅನುಭವ ಆಗಿದೆ.ಅಂಗಡಿಯಲ್ಲಿ ಬೆಲೆ ದುಬಾರಿಯಾಗುತ್ತೆ ಆನ್‌ಲೈನ್‌ನಲ್ಲಿ ಕಡಿಮೆಗೆ ಸಿಗುತ್ತೆ ಅಂತ ಹೇಳಿ ಶಾಪಿಂಗ್ ಮಾಡಲು ಹೊರಟಾಗ ಪೇಚಿಗೆ ಸಿಲುಕಿದ ಘಟನೆಯೊಂದು ನಡೆದಿದೆ.ಕೇವಲ ೪೯ ರೂ.ಗೆ ೪ ಡಜನ್‌ ಮೊಟ್ಟೆ ಸಿಗುತ್ತೆ ಎಂದು ಹೇಳಿ 48,199 ರೂ.ಕಳೆದು ಕೊಂಡಿರುವ ಪ್ರಸಂಗದ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ 38 ವರ್ಷದ ಗೃಹಿಣಿಗೆ ಇ-ಮೇಲ್‌ನಲ್ಲಿ ಜಾಹೀರಾತೊಂದು ಬಂದಿತ್ತು. ಜನಪ್ರಿಯ ಫುಡ್‌ ಡೆಲಿವರಿ ಸಂಸ್ಥೆಯ ಹೆಸರನ್ನು ಆ ಇ-ಮೇಲ್‌ ಜಾಹೀರಾತು ಹೊಂದಿತ್ತು. ಅದರಲ್ಲಿದ್ದ ಲಿಂಕ್‌ ಅನ್ನು ಗೃಹಿಣಿ ಕ್ಲಿಕ್‌ ಮಾಡಿದಾಗ ಹೊಸ ಜಾಲತಾಣವೊಂದು ತೆರೆದುಕೊಂಡಿತ್ತು. ಅದರಲ್ಲಿ ಕೋಳಿ ಮೊಟ್ಟೆ ಇಡುವುದರಿಂದ ಮೊದಲಾಗಿ ಯಾವ ರೀತಿ ಆ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ಮೊಟ್ಟೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುತ್ತದೆ ಎನ್ನುವ ಕುರಿತಾಗಿ ಮಾಹಿತಿ ನೀಡಲಾಗಿತ್ತು.

8 ಡಜನ್‌ ಮೊಟ್ಟೆಗಳನ್ನು ಕೇವಲ 99 ರೂ.ಗಳಿಗೆ ಪ್ರತ್ಯೇಕ ಡೆಲಿವರಿ ಶುಲ್ಕವಿಲ್ಲದೆಯೇ ನೀಡುವುದಾಗಿ ಒಂದು ಆಫರ್‌ನಲ್ಲಿ ಬರೆಯಲಾಗಿತ್ತು. ಮತ್ತೊಂದು ಆಫರಿನಲ್ಲಿ 4 ಡಜನ್‌ ಮೊಟ್ಟೆಗಳನ್ನು 49 ರೂ.ಗಳಿಗೆ ನೀಡುವುದಾಗಿ ಹೇಳಲಾಗಿತ್ತು.ಇದು ಗೃಹಿಣಿ ಗಮನ ಸೆಳೆಯಿತು.ಅದನ್ನು ಆಯ್ಕೆ ಮಾಡಿದಾಗ ಕ್ರೆಡಿಟ್‌ ಕಾರ್ಡ್‌ ಮಾಹಿತಿ ತುಂಬುವಂತೆ ಸೂಚಿಸಲಾಯಿತು. ಗೃಹಿಣಿ ತಮ್ಮ ಕ್ರೆಡಿಟ್‌ ಕಾರ್ಡ್‌ನ ಸಿವಿವಿ ಮತ್ತು ಎಕ್ಸ್‌ಪೈರಿ ಡೇಟನ್ನು ನಮೂದಿಸಿದರು.ನಂತರ ತಮ್ಮ ಮೊಬೈಲಿಗೆ ಬಂದ ಒಟಿಪಿಯನ್ನೂ ನಿಗದಿತ ಜಾಗದಲ್ಲಿ ತುಂಬಿದರು.

ಒಟಿಪಿ ಎಂಟ್ರಿ ಮಾಡಿದ ಕೆಲವೇ ಕ್ಷಣಗಳಲ್ಲಿಅವರ ಬ್ಯಾಂಕ್‌ ಖಾತೆಯಿಂದ ‘ಶೈನ್‌ ಮೊಬೈಲ್‌ ಎಚ್‌ಯು’ ಎನ್ನುವ ಹೆಸರಿನ ಖಾತೆಗೆ 48,199 ರೂ. ಕಡಿತಗೊಂಡಿರುವುದಾಗಿ ಅವರಿಗೆ ಎಸ್ಸೆಮ್ಮೆಸ್‌ ಬಂತು. ಗೃಹಿಣಿಗೆ ತಾವು ಮೋಸ ಹೋಗಿರುವುದು ತಿಳಿದಿದ್ದೇ ಆಗ. ಬ್ಯಾಂಕ್‌ ಖಾತೆಯಲ್ಲಿಇನ್ನೂ 3.7 ಲಕ್ಷ ರೂ.ಗಳಿದ್ದವು. ಅದನ್ನೂ ವಂಚಕರು ಕಬಳಿಸುತ್ತಾರೆ ಎಂದು ಗೃಹಿಣಿ ಆತಂಕಗೊಂಡು ಕೂಡಲೇ ಏನು ಮಾಡಬೇಕೆಂದು ತೋಚದಾಯಿತು.

ಬಳಿಕ ಹಣ ಕಳೆದುಕೊಂಡ ಮಹಿಳೆಗೆ ಕ್ರೆಡಿಟ್‌ ಕಾರ್ಡ್‌ ಬ್ಯಾಂಕಿನಿಂದ ಕರೆ ಬಂದಿತ್ತು. ಕೆಲ ಸಮಯದ ಹಿಂದೆ ನಡೆಸಿದ ವ್ಯವಹಾರದ ಕುರಿತು ಖಚಿತಪಡಿಸಿಕೊಳ್ಳಲು ಅವರು ಕರೆ ಮಾಡಿದ್ದರು. ಗೃಹಿಣಿ ತಮಗಾದ ಮೋಸವನ್ನು ಬ್ಯಾಂಕ್‌ ಗಮನಕ್ಕೆ ತಂದರು. ಕೂಡಲೆ ಅವರ ಬ್ಯಾಂಕ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡಲಾಯಿತು. ಬ್ಯಾಂಕ್‌ ಸಲಹೆಯಂತೆ ಸೈಬರ್‌ ಕ್ರೈಮ್‌ ಸಹಾಯವಾಣಿ(1930)ಗೆ ಕರೆ ಮಾಡಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

ಪಾರಿವಾಳ ಹಿಡಿಯಲು ಹೋದ ಮಕ್ಕಳು ಐಸಿಯುಗೆ ದಾಖಲು..!

ದಕ್ಷಿಣಕನ್ನಡ ಜಿಲ್ಲೆಗೆ ದಿನೇಶ್‌ ಗುಂಡೂರಾವ್, ಉಡುಪಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಉಸ್ತುವಾರಿ ಸಚಿವರು

ನಟಿ ಲೀಲಾವತಿಯನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ..! ಹಿರಿಯ ನಟಿಯ ಆಪ್ತೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಾ..?